POWER SAMACHARA | KANNADA NEWS | BREKING NEWS| 05-08-2023..

ಕಲಬುರಗಿ: ಬಿಜೆಪಿಗೆ ತಾಕತ್ತಿದ್ದರೆ ಐದು ಗ್ಯಾರಂಟಿಗಳನ್ನು ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡುವ ತೀರ್ಮಾನವನ್ನು ಮಾಡಲಿ ಎಂದು ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.

ಅವರು ಇಂದು ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. 5 ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಯಾರಿಗೂ ಅಪನಂಬಿಕೆ ಬೇಡ. ವಿರೋಧ ಪಕ್ಷದವರು ಈ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಾರೆ. ವಿರೋಧ ಪಕ್ಷದವರಲ್ಲದೇ ಈ ದೇಶದ ಪ್ರಧಾನಿಗಳು ಕೂಡ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿಲ್ಲ. ಈ ದೇಶವನ್ನು ದಿವಾಳಿ ಮಾಡಿರುವುದು ನರೇಂದ್ರ ಮೋದಿಯವರು. ಕರ್ನಾಟಕ ಹಿಂದೆ ಎಲ್ಲ ಭರವಸೆಗಳನ್ನು ಈಡೇರಿಸಿದಾಗ ಆರ್ಥಿಕವಾಗಿ ಸುಭದ್ರವಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ, ಬೆಲೆ ಏರಿಕೆ ಮಾಡಿ, ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚು ಮಾಡಿ, ರಾಜ್ಯದ ಬಡವರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದು ಬಿಜೆಪಿ ಸರ್ಕಾರ ಎಂದರು.

ಕಲ್ಯಾಣ ಕರ್ನಾಟಕ ಎಂದು ಹೆಸರನ್ನು ಬದಲಾಯಿಸಿದ್ದೇ ಬಿಜೆಪಿ ಕೊಡುಗೆ

ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಕರ್ನಾಟಕದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರ ರಾಜ್ಯವನ್ನು ಹಿಂದುಳಿಯುವಂತೆ ಮಾಡಿದ್ದು ಭಾಜಪ. ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡುತ್ತಿರುವುದರಿಂದ ಹೊಟ್ಟೆಉರಿಯಿಂದ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರನ್ನು ಬದಲಾಯಿಸಿದ್ದೇ ಬಿಜೆಪಿ ಕೊಡುಗೆ ಎಂದು ವಾಗ್ದಾಳಿ ನಡೆಸಿದರು..

ಬಡತನ ಹಿಂಸೆಯ ಅತಿ ಕೆಟ್ಟ ರೂಪ

ವಿರೋಧ ಪಕ್ಷದವರು ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆಯೂ ಗುಲ್ಲೆಬ್ಬಿಸಿದರು. ಬಡವರ ವಿರೋಧಿ ಸರ್ಕಾರ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಾಗಿ ಮೊದಲು ಒಪ್ಪಿಗೆ ನೀಡಿ, ನಂತರ ಅಕ್ಕಿ ಕೊಡದೇ ರಾಜಕೀಯ ಮಾಡಿದರು. ರೂ. 34 ರಂತೆ ಹಣ ಕೊಡುತ್ತೇವೆ ಎಂದರೂ ಅವರು ಬಡವರಿಗೆ 5 ಕೆಜಿ ಅಕ್ಕಿಯನ್ನು ನೀಡಲಿಲ್ಲ. ಬಡತನ ಹಿಂಸೆಯ ಅತಿ ಕೆಟ್ಟ ರೂಪ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ದೇಶದಲ್ಲಿ ಅಸಮಾನತೆ ಇದೆ, ಬಡತನ ಹಾಗೂ ಶ್ರೀಮಂತಿಕೆ ಇದೆ. ಇದನ್ನು ಹೋಗಲಾಡಿಸುವ ಕೆಲಸ ನಾವು ಮಾಡಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾವು ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 4 ಕೆಜಿಗೆ ಇಳಿಸಿದ್ದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬೆಲೆಏರಿಕೆಯ ಮೂಲಕ ಮೋದಿಯವರು ಜನರ ಬಳಿ ಇದ್ದ ದುಡ್ಡು ಕಿತ್ತುಕೊಳ್ಳತ್ತಾರೆ ಎಂದ ಮುಖ್ಯಮಂತ್ರಿಗಳು ವಿರೋಧಪಕ್ಷದವರ ಮಾತುಗಳಿಗೆ ಕಿವಿ ಕೊಡಬೇಕಾದ ಅಗತ್ಯವಿಲ್ಲ ಎಂದರು. ಕಲಂ 371 ಜೆ ಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರು ಹೇಳಿದ್ದರು. ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿ ತೋರಿಸಿದೆ ಎಂದರು.

ಮಾತಿಗೆ ತಪ್ಪುವುದಿಲ್ಲ

ಕರ್ನಾಟಕ ಸರ್ಕಾರ ಎಂದಿಗೂ ಮಾತಿಗೆ ತಪ್ಪುವುದಿಲ್ಲ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಹೇಳಿಸಿರುವ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳು ಹಾಗೂ ಬಜೆಟ್ ನಲ್ಲಿ ಹೇಳಿರುವ ಯೋಜನೆಗಳನ್ನು ಜಾರಿ ಮಾಡದೇ ಇರುವುದಿಲ್ಲ ಎಂದು ಭರವಸೆಯಿತ್ತರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್, ಶರಣಪ್ರಕಾಶ ಪಾಟೀಲ್ ದರ್ಶನಾಪುರ್, ಶಾಸಕರಾದ ಅಲ್ಲಂಪ್ರಭು, ಕನೀಜ್ ಫಾತಿಮಾ, ಬಿ.ಆರ್.ಪಾಟೀಲ್, ಎಂ.ವೈ ಪಾಟೀಲ್ ಉಪಸ್ಥಿತರಿದ್ದರು.