POWER SAMACHARA | KANNADA NEWS | BREKING NEWS| 27-04-2024 ದಾವಣಗೆರೆ: ಕಳೆದ 30 ವರ್ಷಗಳಿಂದ ಆಡಳಿತ ನಡೆಸಿದವರು ಈಗಲೂ ಭರವಸೆಗಳನ್ನೇ ಕೊಡುತ್ತಿದ್ದಾರೆ. ಅಧಿಕಾರ ಅನುಭವಿಸಿ ಆಸ್ತಿ ಮಾಡಿ ಈಗ ಜನರ ಬಳಿಗೆ ಅದೇ ಭರವಸೆ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆ ಬಂದಾಗ ಹೇಳಿದ್ದನ್ನೇ ಹೇಳುವವರು ಬೇಕಾ? ಜನಸೇವೆಗೆಂದು ಬಂದಿರುವ ಜನಸಾಮಾನ್ಯನಾಗಿ ಬಂದಿರುವ ನನಗೆ ಬೆಂಬಲಿಸಿ. ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ದೇಶವೇ ದಾವಣಗೆರೆಯತ್ತ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಹೇಳಿದರು.  ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ, ಶಿಂಗ್ರಿಹಳ್ಳಿ, ಶಿಂಗ್ರಿಹಳ್ಳಿ ದೊಡ್ಡ ತಾಂಡಾ, ಲಕ್ಷ್ಮೀಪುರ ತಾಂಡಾ ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದ ಅವರು ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಹೋದ ಕಡೆಗಳಲ್ಲಿ ನೀರಾವರಿ ಯೋಜನೆಗಳು, ಕೈಗಾರಿಕಾ ಸ್ಥಾಪನೆ, ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಅಭಿವೃದ್ಧಿ ವಿಚಾರಗಳ ಕುರಿತಂತೆ ಭರವಸೆ ನೀಡುವುದನ್ನು ನೀವೆಲ್ಲರೂ ನೋಡುತ್ತಲೇ ಇದ್ದೀರಾ. ಹಾಗಿದ್ದರೆ, ಅಧಿಕಾರದಲ್ಲಿದ್ದಾಗ ಯಾಕೆ ಈ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಲೋಕಸಭೆ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಜನರ ಮುಂದೆ ಬಂದು ಅದೇ ಸುಳ್ಳು ಭರವಸೆ ನೀಡಿ ಹೋಗುತ್ತಿದ್ದಾರೆ. ಬಡ ಕುಟುಂಬದ ಹಿನ್ನೆಲೆಯಿಂದ ಬಂದ ನಾನು ನಿಮ್ಮ ಬಳಿಗೆ ಬಂದಿದ್ದೇನೆ. ಸಂಕಷ್ಟ ಕೇಳಿದ್ದೇನೆ, ಸಮಸ್ಯೆಗಳನ್ನು ಅರಿತಿದ್ದೇನೆ. ನಿಮ್ಮ ಮನೆ ಮಗನಂತೆ ಕೆಲಸ ಮಾಡಿ ತೋರಿಸುತ್ತೇನೆ. ನಾನು ಕೇಳುತ್ತಿರುವುದು ಒಂದು ಅವಕಾಶ ಮಾತ್ರ ಎಂದರು.  ಸಿಲಿಂಡರ್ ಗುರುತು ಸಿಕ್ಕಿದ್ದು, ಕ್ರಮ ಸಂಖ್ಯೆ 28 ಆಗಿದೆ. ಮೇ 7ರಂದು ನಡೆಯುವ ಮತದಾನದ ದಿನದಂದು ಸಿಲಿಂಡರ್ ಗೆ ಹೆಚ್ಚಿನ ಮತ ಹಾಕುವಂತೆ ಮನೆ ಮನೆಗೆ ಹೋಗಿ ಹಗಲು ರಾತ್ರಿ ವಿರಮಿಸದೇ ಕೆಲಸ ಮಾಡಿ. ಹರಪನಹಳ್ಳಿ ತಾಲೂಕಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಪಾದಯಾತ್ರೆ ನಡೆಸಿ, ಹಳ್ಳಿಗಳಿಗೆ ಹೋಗಿ ತಿಳಿದುಕೊಂಡಿದ್ದೇನೆ. ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಗಲಿರುಳು ಶ್ರಮಿಸುತ್ತೇನೆ, ನೂರಾರು ಬಡವರ ಮಕ್ಕಳಿಗೆ ಸಹಾಯ ಮಾಡಿದ್ದೇನೆ. ಕೇವಲ ಕೋಚಿಂಗ್ ಸೆಂಟರ್ ವೊಂದರಿಂದಲೇ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಲು ಆಗದು. ಹಾಗಾಗಿ, ಶಾಲಾ ಕಾಲೇಜುಗಳು ಹೆಚ್ಚಾಗಿ ಆಗಬೇಕು. ನಗರ ಪ್ರದೇಶಗಳಲ್ಲಿ ಸಿಗುವಂತ ಮೂಲಭೂತ ಸೌಲಭ್ಯ, ಗುಣಮಟ್ಟದ ಶಿಕ್ಷಣ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗುವುದು. ಬಡವರ ಮಕ್ಕಳೂ ಸಹ ಐಎಎಸ್, ಐಪಿಎಸ್ ಶಿಕ್ಷಣ ಪಡೆಯುವಂತಾಗಬೇಕು. ಶ್ರೀಮಂತರ ಮಕ್ಕಳು ಮಾತ್ರ ಐಎಎಸ್, ಐಪಿಎಸ್ ಆಗುತ್ತಾರೆ. ಬಡವರ ಮಕ್ಕಳಿಗೆ ಸೂಕ್ತ ಸೌಲಭ್ಯ ಸಿಕ್ಕರೆ ಸಾಧನೆ ಮಾಡಿಯೇ ಮಾಡುತ್ತಾರೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ತಿಳಿಸಿದರು.
ಸಾಮಾನ್ಯ ಯುವಕನ ಹೋರಾಟಕ್ಕೆ ಬೆಂಬಲಿಸಿ..
ನಾನು ದೊಡ್ಡವರನ್ನು ಎದುರು ಹಾಕಿಕೊಂಡು ಚುನಾವಣಾ ಕಣಕ್ಕಿಳಿದಿದ್ದೇನೆ. ಸಾಮಾನ್ಯ ಯುವಕ ಹೋರಾಟ ಮಾಡುತ್ತಿದ್ದು, ಅವಕಾಶ ಕೊಡುವಂತೆ ಮನವಿ ಮಾಡುತ್ತಿದ್ದೇನೆ. ಪ್ರಬಲರ ಎದುರು ಸ್ಪರ್ಧೆ ಮಾಡುವುದು ಸುಲಭವಲ್ಲ. ದೊಡ್ಡ ಪಕ್ಷಗಳ ವಿರುದ್ಧ ನಾನು ಸ್ಪರ್ಧೆ ಮಾಡುವುದು ಸುಲಭವಲ್ಲ. ನಾನು ಇದಕ್ಕೆ ಸರಿ ಸಮಾನವಾಗಿ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದೇನೆ. ನನಗೆ ಬೇಕಿರುವುದು ಮತದಾರರ ಆಶೀರ್ವಾದ ಎಂದು ಹೇಳಿದರು. ಒಂದು ಅವಕಾಶ ಮಾಡಿಕೊಟ್ಟರೆ ರಾಜಕೀಯ ಇತಿಹಾಸ ಸೃಷ್ಟಿಯಾದಂತಾಗುತ್ತದೆ. ರಾಜಕಾರಣಕ್ಕೆ ಬರಲು ನೂರಾರು ಯುವಕರಿಗೆ ಪ್ರೇರಣೆ ಸಿಗುವಂತಾಗುತ್ತದೆ. ರಾಜಕೀಯ ಹೊಲಸು, ಕೊಳಕು ಎಂದುಕೊಂಡವರಲ್ಲಿಯೂ ಹೊಸ ಆಶಾಕಿರಣ ಮೂಡುತ್ತದೆ. ಜೊತೆಗೆ ಮಾರ್ಗವೂ ಸಿಕ್ಕಂತಾಗುತ್ತದೆ ಎಂದು ವಿನಯ್ ಕುಮಾರ್ ಅಭಿಪ್ರಾಯಪಟ್ಟರು. ಇನ್ನು ರಾಗಿಮಸಲವಾಡ ಗ್ರಾಮಕ್ಕೆ ಜಿ. ಬಿ. ವಿನಯ್ ಕುಮಾರ್ ಅವರು ಆಗಮಿಸುತ್ತಿದ್ದಂತೆ ಜನರು ಅದ್ಧೂರಿಯಾಗಿ ಬರಮಾಡಿಕೊಂಡರು. ನೂರಾರು ಸಂಖ್ಯೆಯಲ್ಲಿ ಆಗಮಿಸಿ ವಿನಯ್ ಕುಮಾರ್ ಪರ ಜೈಕಾರ ಕೂಗಿದರು. ಈ ಬಾರಿ ಗ್ಯಾಸ್ ಸಿಲಿಂಡರ್ ಗೆ ಮತವಣ್ಣ, ವಿನಯ್ ಕುಮಾರ್ ಗೆ ನಮ್ಮ ಬೆಂಬಲವಣ್ಣ ಎಂಬ ಘೋಷಣೆ ಕೂಗಿದರು. ಈ ವೇಳೆ ಗ್ರಾಮದ ಮುಖಂಡರಾದ ಚನ್ನಪ್ಪ, ದೊಡ್ಡೇಶ್, ಆನಂದ್, ಹನುಮಂತಪ್ಪ ಸೇರಿದಂತೆ ಹಲವರು ಹಾಜರಿದ್ದರು.
ಶಿಂಗ್ರಿಹಳ್ಳಿ, ಶಿಂಗ್ರಿಹಳ್ಳಿ ತಾಂಡಾದಲ್ಲಿ ಹವಾ..
ಶಿಂಗ್ರಿಹಳ್ಲಿ, ಶಿಂಗ್ರಿಹಳ್ಳಿ ತಾಂಡಾ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿನಯ್ ಕುಮಾರ್ ಅವರು ಮತಯಾಚನೆ ಮಾಡಿದರು. ಹಿತೈಷಿಗಳು, ಬೆಂಬಲಿಗರು, ಅಭಿಮಾನಿಗಳು ವಿನಯ್ ಕುಮಾರ್ ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಿದರು. ಮಹಿಳೆಯರೂ ಸಹ ವಿನಯ್ ಕುಮಾರ್ ಅವರಿಗೆ ಆರತಿ ಎತ್ತಿ, ಹಣೆಗೆ ಕುಂಕುಮ ಇಟ್ಟು ಬೆಂಬಲ ಇದೆ ಎಂದು ಹೇಳಿದರು. ಈ ವೇಳೆ ಶಿಂಗ್ರಿಹಳ್ಳಿ ಗ್ರಾಮದ ನಾಗರಾಜ್, ವೆಂಕಟೇಶ್, ಮಂಜಪ್ಪ, ಹನುಮಂತಪ್ಪ, ಉಚ್ಚಂಗೆಪ್ಪ, ಶಿಂಗ್ರಿಹಳ್ಳಿ ದೊಡ್ಡ ತಾಂಡಾದ ವೈ. ರಮೇಶ್ ನಾಯ್ಕ, ಜಿ. ನಾಗರಾಜ, ಕೀರ್ತಿ, ನಾಗರಾಜ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮಗಳಿಗೆ ಹೋಗುತ್ತಿದ್ದಂತೆ ಆಗಮಿಸಿದ ಜನರು ಈ ಬಾರಿ ಕುಟುಂಬ ರಾಜಕಾರಣಕ್ಕೆ ನಮ್ಮ ವಿರೋಧ ಇದೆ. ಕಳೆದ 30 ವರ್ಷಗಳಿಂದಲೂ ಭರವಸೆಯನ್ನೇ ಕೇಳಿ ಕೇಳಿ ಸಾಕಾಗಿ ಹೋಗಿದೆ. ಈ ಬಾರಿ ಬದಲಾವಣೆ ಬೇಕು. ಯುವ ಉತ್ಸಾಹಿ ಯುವಕ ಪಕ್ಷೇತರರಾಗಿ ಕಣಕ್ಕಿಳಿದಿದ್ದು, ಸ್ವಾಭಿಮಾನಿಗಳಾಗಿ ಮತಚಲಾಯಿಸುತ್ತೇವೆ ಎಂದು ಹೇಳಿದರು.