POWER SAMACHARA | KANNADA NEWS | BREKING NEWS| 16-06-2023..

ದಾವಣಗೆರೆ: ರಾಜ್ಯದಲ್ಲಿ ಶೇ 21 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು ಮಾನದಂಡದಂತೆ ಶೇ 33 ರಷ್ಟು ಅರಣ್ಯ ಪ್ರದೇಶ ಇರಬೇಕಾಗಿದೆ. ಈ ಗುರಿಯನ್ನು ಹಂತ ಹಂತವಾಗಿ ಮುಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ, ಈ ವರ್ಷ ಐದು ಕೋಟಿ ಸಸಿ ನೆಡಲು ಗುರಿ ಹೊಂದಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ.ಖಂಡ್ರೆಯವರು ತಿಳಿಸಿದರು.

ಶುಕ್ರವಾರ ದಾವಣಗೆರೆಯ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಬಳ್ಳಾರಿ ವೃತ್ತ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಪರಿಸರ ಅಧಿಕಾರಿಗಳ ಸಭೆಯಲ್ಲಿ ಪರಿಶೀಲನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಮಾನದಂಡದನ್ವಯ ಶೇ 33 ರಷ್ಟು ಅರಣ್ಯ ಪ್ರದೇಶ ಇರಬೇಕಾಗಿದ್ದು ರಾಜ್ಯದಲ್ಲಿ ಶೇ 12 ರಷ್ಟು ಅರಣ್ಯ ಪ್ರದೇಶದ ಕೊರತೆ ಇದೆ. ಇದನ್ನು ಪ್ರತಿ ವರ್ಷ ಅರಣ್ಯವನ್ನು ಬೆಳೆಸುವುದರ ಮೂಲಕ ಗುರಿ ತಲುಪಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿ ಮಳೆಗಾಲ ಆರಂಭವಾದ ತಕ್ಷಣ ಸಸಿಗಳನ್ನು ನೆಡೆಸಲು ಮತ್ತು ರೈತರಿಗೂ ಸಸಿಗಳನ್ನು ವಿತರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಕಾರ್ನಾನೆ ಕಲುಷಿತ ಹೊಗೆ ಬಿಡೋದು ತಡೆಗಟ್ಟಿ, ದೆಹಲಿಯ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ, ಆ ಪರಿಸ್ಥಿತಿ ಇಲ್ಲಿ ಆಗೋದು ಬೇಡ, ಮುಂಜಾಗ್ರತೆ ವಹಿಸಿ, ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಗಮನ ಹರಿಸಿ, ಗಣಿಗಾರಿಕೆ ಒತ್ತುವರಿ, ವಿಂಡ್ ಗೆ ಗಡಿ ಗುರುತಿಸಿ, ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದರು..

ನಿಯಮಬದ್ದ ಗಣಿಗಾರಿಕೆ;

ಯಾವುದೇ ಗಣಿಗಾರಿಕೆಯನ್ನು ಕಾನೂನುಬಾಹಿರವಾಗಿ ಮಾಡಲು ಅವಕಾಶ ಇಲ್ಲ, ಆದರೆ ನಿಯಮಬದ್ದವಾದ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನಿಯಮ ಬಾಹಿರವಾಗಿ ಗಣಿಗಾರಿಕೆ ಮಾಡಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಲ್ಲಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದರು.

ಅರಣ್ಯ ಅಂಚಿನಲ್ಲಿರುವ ಜನವಸತಿ ತೆರವಿಲ್ಲ

ಕಳೆದ ನಲವತ್ತು, ಐವತ್ತು ವರ್ಷಗಳಿಂದ ಅರಣ್ಯ ಅಂಚಿನಲ್ಲಿ ವಾಸಿಸುತ್ತಿರುವ ಜನವಸತಿ ಪ್ರದೇಶವನ್ನು ಒಕ್ಕಲೆಬ್ಬಿಸುವುದಿಲ್ಲ. ಮತ್ತು ಪಾರಂಪಾರಿಕವಾಗಿ ಉಳುಮೆ ಮಾಡುವವರನ್ನು ಒಕ್ಕಲೆಬ್ಬಿಸುವುದಿಲ್ಲ. ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ಕಳುಹಿಸಲಾಗುತ್ತದೆ ಎಂದ ಅವರು ಗಣಿಗಾರಿಕೆ ಮತ್ತು ವಿಂಡ್ ಮಿಲ್‍ಗೆ ಅನುಮತಿ ಪಡೆದು ಒತ್ತುವರಿ ಮಾಡಿದಲ್ಲಿ ಅಂತಹ ಪ್ರದೇಶದ ತೆರವಿಗೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಯಾವುದೇ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದಲ್ಲಿ ಅದನ್ನು ಜಿ.ಪಿ.ಎಸ್ ಮತ್ತು ಸ್ಯಾಟಲೈಟ್ ಮೂಲಕ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕಾಡು ಪ್ರಾಣಿಗಳಿಂದ ರಕ್ಷಣೆಗೆ ಕ್ರಮ;

ವನ್ಯಜೀವಿ ಸಂರಕ್ಷಣೆ ಮಾಡುವುದು ಇಲಾಖೆಯ ಹೊಣೆಗಾರಿಕೆಯಾಗಿದ್ದು ಇದೇ ವೇಳೆ ಕಾಡುಪ್ರಾಣಿಗಳಿಂದ ಜನರಿಗಾಗುವ ತೊಂದರೆಗಳನ್ನು ತಪ್ಪಿಸಲು ಅಗತ್ಯವಿರುವ ಕಡೆ ರೇಲ್ ಬ್ಯಾರಿಕೇಡ್ ಅಥವಾ ಸೋಲಾರ್ ತಂತಿಬೇಲಿಯ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ ವರ್ಷ 52 ಜನರು ಆನೆ ತುಳಿತದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದು ಇತ್ತಿಚೇಗೆ ಚಾಮರಾಜನಗರದಲ್ಲಿ ಆನೆ ತುಳಿತದಿಂದ ಪ್ರಾಣ ಕಳೆದುಕೊಂಡ ಮೃತರ ಕುಟುಂಬಕ್ಕೆ ರೂ.15 ಲಕ್ಷ ಪರಿಹಾರದ ಚೆಕ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಆನೆಗಳಿಂದಾಗುವ ಸಮಸ್ಯೆಗಳ ಬಗ್ಗೆಯೂ ಗಮನಿಸಲಾಗಿದೆ ಎಂದರು.

ಮಾಲಿನ್ಯ ತಡೆಗೆ ಕ್ರಮ;

ಕಾರ್ಖಾನೆಗಳು ಬಿಡುವ ಹೊಗೆ, ಧೂಳು, ಕೆರೆಗಳಿಗೆ ಬಿಡುವ ನೀರಿನಿಂದ ನೀರು ಮಾಲಿನ್ಯ, ವಾಯು ಮಾಲಿನ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಅಧಿಕಾರಿಗಳು ಅಂತಹ ಕಾರ್ಖಾನೆಗಳಿಗೆ ಭೇಟಿ ನೀಡಿ ಮಾಲಿನ್ಯ ತಡೆಗೆ ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸುವರು. ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಬೇಕಾದ ಕಟ್ಟುನಿಟ್ಟಿನ ಕ್ರಮವನ್ನು ಇಲಾಖೆ ಮಾಡಲಿದೆ ಎಂದರು.

ಜೂನ್ 30 ರೊಳಗೆ ವರ್ಗಾವಣೆ ಪೂರ್ಣ

ಸರ್ಕಾರವು ಸಾಮಾನ್ಯ ವರ್ಗಾವಣೆ ಮಾಡಲು ಜೂನ್ 30 ರವರೆಗೆ ಅವಧಿ ವಿಸ್ತರಿದೆ. ಅಷ್ಟರೊಳಗಾಗಿ ವರ್ಗಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಎಲ್ಲೆಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎನ್ನುವುದನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕೊರತೆ ನೀಗಿಸಲು ಕ್ರಮ ವಹಿಸಲಾಗುತ್ತದೆ ಎಂದರು. ಅರಣ್ಯ ಇಲಾಖೆ ಬಳ್ಳಾರಿ ವೃತ್ತದ ನೋಡಲ್ ಅಧಿಕಾರಿ ಪ್ರಭಾಷ್ ಚಂದ್ರ ರೇ ಪ್ರಾಸ್ತಾವಿಕವಾಗಿ ಮಾತನಾಡಿ, ಬಳ್ಳಾರಿ ವೃತ್ತದ ವ್ಯಾಪ್ತಿಗೆ ಐದು ಜಿಲ್ಲೆಗಳು ಬರಲಿದ್ದು 3.28 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿದೆ. ಇದರಲ್ಲಿ 9 ವನ್ಯಜೀವಿಧಾಮಗಳು ಇವೆ. ದಾವಣಗೆರೆ ಜಿಲ್ಲೆಯಲ್ಲಿ ಶೇ 12 ರಷ್ಟು ಅರಣ್ಯ ಪ್ರದೇಶ ಇದೆ. ವಿಜಯನಗರ, ಬಳ್ಳಾರಿ, ಚಿತ್ರದುರ್ಗದಲ್ಲಿ ಇದು ಹೆಚ್ಚಿದೆ. ಮತ್ತು ಈ ಜಿಲ್ಲೆಗಳಲ್ಲಿ 600 ಕ್ಕೂ ಹೆಚ್ಚು ವಿಂಡ್ ಮಿಲ್‍ಗಳಿವೆ. ಈ ವೃತ್ತ ಹೆಚ್ಚು ಬಯಲುಸೀಮೆಯನ್ನು ಹೊಂದಿದ್ದು ಶೇ 75 ರಷ್ಟು ಅರಣ್ಯ ವಾಚರ್ಸ್ ಹುದ್ದೆಗಳು ಖಾಲಿ ಇವೆ ಎಂದರು.

ಅರಣ್ಯ ಹೆಚ್ಚಿಸಲು ಕ್ರಮ

ಬಳ್ಳಾರಿ ವೃತ್ತದ ವ್ಯಾಪ್ತಿಯಲ್ಲಿ ಪ್ರತಿ ವರ್ಷ 5 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೆಚ್ಚಿಸಲು ಉದ್ದೇಶಿಸಿದ್ದು ಪ್ರತಿ ವರ್ಷ ಇದಕ್ಕಾಗಿ 100 ಕೋಟಿವರೆಗೆ ಖರ್ಚು ಮಾಡುತ್ತಿದ್ದು ಉದ್ಯೋಗ ಖಾತರಿಯಡಿಯು 52 ಕೋಟಿ ಅರಣ್ಯೀಕರಣಕ್ಕೆ ಖರ್ಚು ಮಾಡಲಾಗಿದೆ. ಕೆಎಂಇಆರ್‍ಸಿ ಯಡಿ ಸುಮಾರು 480 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಗಣಿಬಾದಿತ ಜಿಲ್ಲೆಗಳಲ್ಲಿ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

20 ವರ್ಷಗಳಲ್ಲಿ ಅರಣ್ಯಾಭಿವೃದ್ದಿ;

ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ, ರಂಗಯ್ಯನದುರ್ಗ, ವಿಜಯನಗರ ಧರೋಜಿ, ಬಳ್ಳಾರಿಯ ಮಿಂಚೇರಿಯ ಅರಣ್ಯದಲ್ಲಿ ಕಳೆದ 20 ವರ್ಷಗಳಲ್ಲಿ ಸಾಕಷ್ಟು ಅರಣ್ಯಾಭಿವೃದ್ದಿಯಾಗಿರುವುದನ್ನು ಗಮನಿಸಲಾಗಿದೆ ಎಂದರು.

ಸಭೆಯಲ್ಲಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ದಾವಣಗೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಐದು ಜಿಲ್ಲೆಗಳ ಅರಣ್ಯ ಸಂರಕ್ಷಣಾಧಿಕಾರಿಗಳು, ಪರಿಸರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಸಿನೆಟ್ಟ ಸಚಿವರು; ಸಭೆಗೂ ಮೊದಲು ಸಚಿವರು ಕಚೇರಿಯ ಮುಂಭಾಗದಲ್ಲಿ ಸಸಿಯನ್ನು ನೆಟ್ಟು ಅರಣ್ಯ ಇಲಾಖೆ ಸಿಬ್ಬಂದಿಯವರಿಂದ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.