POWER SAMACHARA | KANNADA NEWS | BREKING NEWS| 29-07-2024
ದಾವಣಗೆರೆ: ಮಧ್ಯ ಕರ್ನಾಟಕದ ಜೀವ ನಾಡಿ ಭದ್ರಾ ಡ್ಯಾಂ ಭರ್ತಿಯಾಗಿದ್ದು, ನಾಲೆಗಳಿಗೆ ಇಂದಿನಿಂದಲೇ ನೀರು ಬಿಡುಗಡೆ ಸಭೆಯಲ್ಲಿಂದು ತೀರ್ಮಾನ ಮಾಡಲಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ..
ಶಿವಮೊಗ್ಗ ನಗರದಲ್ಲಿಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಕಾಡಾ ಸಭೆ ನಡೆದಿದ್ದು, ಡ್ಯಾಂ ಭರ್ತಿ ಆಗುವ ಹಂತದಲ್ಲಿದ್ದು ಈ ಹಿನ್ನಲೆ ಇಂದಿನಿಂದಲೇ ನೀರು ಬಿಡುಗಡೆಗೆ ಸಭೆ ತೀರ್ಮಾನಿಸಿತು, ಮಧ್ಯ ಕರ್ನಾಟಕ ಭಾಗದ ಜೀವನಾಡಿಯಾಗಿರುವ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಆಗುವ ಹಿನ್ನಲೆ ರೈತರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆ ಮುಂದುವರೆಸಿದ್ದಾರೆ.
ಸಭೆಯಲ್ಲಿ ಕಾಡಾ ಅಧ್ಯಕ್ಷ ಅಂಶುಮಂತ್ ಗೌಡ ಮಾತನಾಡಿ ನೀರಿನ ನಿರ್ವಹಣೆಗೆ ಇವತ್ತಿನಿಂದ ಬಿಡಲು ಸಚಿವರ ಅನುಮತಿಯ ಮೇರೆಗೆ ತೀರ್ಮಾನಿಸಲಾಗಿದೆ ಎಂದರು.
ಇಂದಿನಿಂದಲೇ ನೀರು ಬಿಡುಗಡೆ..
ಸಭೆ ಬಳಿಕ ಮಾತನಾಡಿದ ಸಚಿವ ಮಧುಬಂಗಾರಪ್ಪ, ಭದ್ರಾ ಡ್ಯಾಂನಿಂದ ಇಂದಿನಿಂದಲೇ ನಾಲೆಗಳಿಗೆ ನೀರು ಬಿಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಂದು ಕಾಡಾ ಕಚೇರಿಯಲ್ಲಿ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿ ಬರಗಾಲದಿಂದ ತತ್ತರಿಸಿ ಹೋಗಿದ್ದೆವು. ಈ ಬಾರಿ ಜಿಲ್ಲೆಯ ಎಲ್ಲಾ ಡ್ಯಾಂಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಕೆಲವೊಂದು ಪ್ರದೇಶಗಳಿಗೆ ಈ ಬಾರಿಯೂ ನೀರು ತಲುಪಿಲ್ಲ ಎಂದು ರೈತರು ಆರೋಪಿಸಿದ ಹಿನ್ನೆಲೆಯಲ್ಲಿ ಇಂದಿನಿಂದಲೇ ನಿರಂತರವಾಗಿ ನೀರು ಬಿಡಲು ತೀರ್ಮಾನಿಸಲಾಗಿದೆ. ರೈತರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇವೆ. ಅನೇಕ ಕಡೆ ಭತ್ತವನ್ನು ನಿಲ್ಲಿಸಿ ಅಡಿಕೆ ಬೆಳೆ ಹಾಕಿದ್ದಾರೆ. ಬೇಸಿಗೆಯಲ್ಲಿ ಅಡಿಕೆಗೆ ಹೆಚ್ಚು ನೀರು ಬೇಕಾಗುತ್ತದೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ನೀರಾವರಿ ಇಂಜಿನಿಯರ್ಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.*
ಇನ್ನು ಚಾನೆಲ್ನಿಂದ ಅನಧಿಕೃತ ಪಂಪ್ಸೆಟ್ಗಳ ಮೂಲಕ ನೀರು ಪಡೆಯುತ್ತಿದ್ದು, ಅದನ್ನು ನಿಲ್ಲಿಸಲು ಆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ. ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದಿದ್ದಾರೆ. ತುಂಗೆಯಿಂದ ಭದ್ರೆಗೆ ನೀರು ಹರಿಸುವ ಯೋಜನೆ ಕೂಡ ಮುಂದಿನ ಭಾಗದಲ್ಲಿ ಕೈಗೆತ್ತಿಕೊಳ್ಳುತ್ತೇವೆ. ಇದಕ್ಕೆ ಕೋಟ್ಯಾಂತರ ರೂ. ಬೇಕಾಗಿದೆ. ಅದಕ್ಕಾಗಿ ನೀರಾವರಿ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇವೆ. ಅವರು 15 ದಿನದೊಳಗೆ ಶಿವಮೊಗ್ಗಕ್ಕೆ ಆಗಮಿಸಿ ಒಂದು ದಿನ ಪೂರ್ತಿ ನಮ್ಮದೊಂದಿಗೆ ಇದ್ದು, ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ನೀರಾವರಿ ನಿಗಮದಿಂದ ಎಲ್ಲಾ ಶಾಸಕರ ಕ್ಷೇತ್ರಕ್ಕೆ ನೀರಾವರಿಗೆ ಮೊದಲ ಆದ್ಯತೆ ನೀಡಿ ಹೆಚ್ಚಿನ ಹಣ ಬಿಡುಗಡೆಗೆ ಈಗಾಗಲೇ ಡಿಸಿಎಂ ತೀರ್ಮಾನಿಸಿದ್ದಾರೆ. ಮಳೆಗೆ ಅನುಗುಣವಾಗಿ ಬೆಳೆಗೆ ತೊಂದರೆಯಾಗದ ರೀತಿಯಲ್ಲಿ ನೀರು ಬಿಡಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಸಲಹ ಸಮಿತಿಯಲ್ಲಿ ತೀರ್ಮಾನಿಸಿದಂತೆ ನೀರು ಬಿಡಲಾಗುವುದು ಎಂದಿದ್ದಾರೆ.
ಸಭೆಯಲ್ಲಿ ಮಾಯಕೊಂಡ ಶಾಸಕರಾದ ಕೆ ಎಸ್ ಬಸವಂತಪ್ಪ, ಹೊನ್ನಾಳಿ ಶಾಸಕ ಡಿಜಿ ಶಾಂತನಗೌಡ ,ಹರಿಹರ ಶಾಸಕ ಬಿಪಿ ಹರೀಶ್, ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ, ಹರಪನಹಳ್ಳಿ ಶಾಸಕ ಲತಾ ಮಲ್ಲಿಕಾರ್ಜುನ್, ಶಿವಮೊಗ್ಗ ನಗರದ ಶಾಸಕರು ,ರೈತ ಸಂಘದ ಅಧ್ಯಕ್ಷರು, ಮುಖಂಡರು, ರೈತರು, ಜಿಲ್ಲಾಧಿಕಾರಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು..