POWER SAMACHARA | KANNADA NEWS | BREKING NEWS| 08-09-2023..
ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದಂತೆ ಬಿಜೆಪಿ ತಂತ್ರಗಾರಿಕೆ ಶುರು ಮಾಡಿದ್ದು, ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗ್ತಿದೆ..
ಮಾಜಿ ಸಿಎಂ ಬಿಎಸ್ ವೈ ಸ್ಪಷ್ಟನೆ..
ಈ ವಿಷಯವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದು, ಪಕ್ಷಕ್ಕೆ ದೊಡ್ಡ ಮಟ್ಟದ ಕಾರ್ಯಕರ್ತರು ಸೇರುತ್ತಾರೆ, ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಒಪ್ಪಿಗೆ ಆಗಿದೆ, ಜೆಡಿಎಸ್ ಗೆ 4 ಸೀಟು ಕೊಡಲು ಅಮಿತ್ ಷಾ ಒಪ್ಪಿದ್ದಾರೆ, ಜೆಡಿಎಸ್ಗೆ 4, ಬಿಜೆಪಿಗೆ 24 ಸೀಟ್ ಹಂಚಿಕೊಳ್ಳಲು ತೀರ್ಮಾನವಾಗಿದೆ. ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್ಗೆ ಸಪೋರ್ಟ್ ಮಾಡಲು ತೀರ್ಮಾನ ಆಗಿದೆ ಅಂತ ಬಿಎಸ್ವೈ ಹೇಳಿದ್ದಾರೆ. ಇನ್ನೂ ಜೆಡಿಎಸ್ ಮೈತ್ರಿಯಿಂದ ಸಂತೋಷ ಆಗಿದೆ, ಮೈತ್ರಿಯಿಂದ ನಮಗೆ ಶಕ್ತಿ ಬಂದಿದೆ, ಇಂದಿನವರೆಗೂ ನಾನು ಶಾಂತನಾಗಿದ್ದೆ, ಇನ್ಮುಂದೆ ಕಾಂಗ್ರೆಸ್ ವಿರುದ್ದ ಹೋರಾಟ ಮಾಡುತ್ತೇನೆ, ಕಾಂಗ್ರೆಸ್ ನ ಭ್ರಷ್ಟಾಚಾರದ ವಿರುದ್ದ ಸಾಮೂಹಿಕವಾಗಿ ಹೋರಾಟ ಮಾಡುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ..
ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ
ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಈ ಮೈತ್ರಿ ಮಾತುಕತೆ ಬಹಳ ಅವಶ್ಯಕ, ಮಹತ್ವದ್ದಾಗಿದೆ. ಈ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗುವುದು ಮುಖ್ಯವಾಗಿತ್ತು. ಹೀಗಾಗಿ ನಾವು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಮೈತ್ರಿ ಸ್ಥಾನಗಳ ಹಂಚಿಕೆ ಬಗ್ಗೆ ಮುಂದೆ ತೀರ್ಮಾನ ಆಗಲಿದೆ. ನಮ್ಮ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದಿದ್ದಾರೆ..
ಕುತೂಹಲ ಕೆರಳಿಸಿದ ಷಾ-ದೇವೇಗೌಡರ ಭೇಟಿ..
ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮತ್ತೆ ಮುನ್ನಲೆಗೆ ಬಂದಿದೆ. ಲೋಕಸಭಾ ಚುನಾವಣೆಗೆ ದಾಳ ಉರುಳಿಸಿರುವ ದಳಪತಿಗಳು ಬಿಜೆಪಿ ವರಿಷ್ಠ ನಾಯಕರನ್ನು ಭೇಟಿ ಮಾಡಿದ್ದಾರೆ. ಮೂಲಗಳ ಪ್ರಕಾರ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ..
ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರ ಕೋರ್ಟ್ ಕೇಸ್ ಗೆ ಸಂಬಂಧಿಸಿದಂತೆ ವಕೀಲರ ಭೇಟಿಗೆ ಆಗಮಿಸಿದ್ದ ಎಚ್.ಡಿ ದೇವೇಗೌಡರು ಇದೇ ವೇಳೆ ರಹಸ್ಯವಾಗಿ ಅಮಿತ್ ಶಾ ಭೇಟಿಯಾಗಿದ್ದಾರೆ. ಉಭಯ ನಾಯಕರ ನಡುವೆ ಮೈತ್ರಿ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ನಾಲ್ಕೈದು ಸ್ಥಾನಗಳ ಬೇಡಿಕೆ ಇಟ್ಟಿರುವ ದೇವೇಗೌಡರು, ಹಾಸನ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಬೆಂಬಲ ನೀಡಿ ಎಂದಿದ್ದಾರಂತೆ. ಈ ಭಾಗದಲ್ಲಿ ನಮಗೆ ಹೆಚ್ಚು ಶಕ್ತಿ ಇದೆ, ಇಲ್ಲಿ ನಮಗೆ ಹೋರಾಡುವ ಶಕ್ತಿ ಇದೆ, ಈ ಭಾಗದಲ್ಲಿ ನಮ್ಮ ಜೊತೆ ಕೈ ಜೋಡಿಸಿ, ಉಳಿದ ಕಡೆ ನಾವು ನಿಮಗೆ ಬೆಂಬಲ ನೀಡುತ್ತೇವೆ. ಎಂದಿದ್ದಾರಂತೆ. ಮಾತುಕತೆ ಒಪ್ಪಿದರೆ ಸೆ.10ರ ಸಮಾವೇಶದ ಬಳಿಕ ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ಗಡುವು ನಿಗದಿ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ದೇವೇಗೌಡರ ಮಾತು ಕೇಳಿಸಿಕೊಂಡಿರುವ ಅಮಿತ್ ಶಾ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ..