POWER SAMACHARA | KANNADA NEWS | BREKING NEWS| 26-07-2023..

ದಾವಣಗೆರೆ: ಜಿಲ್ಲೆಯ ಅನ್ನದ ಬಟ್ಟಲು ಅಂತಾನೆ ಕರೆಯುವ ಭದ್ರಾ ಡ್ಯಾಂಗೆ ಸಾಕಷ್ಟು ನೀರು ಹರಿದು ಬರುತ್ತಿದೆ, ಬುಧವಾರ ಬೆಳಿಗ್ಗೆಯ ವರದಿ ಪ್ರಕಾರ 24704 ಕ್ಯೂಸೆಕ್ಸ್ ಒಳ ಹರಿವು ಇದ್ದು 155.3 ಅಡಿಗೆ ಏರಿದೆ..

ನಿನ್ನೆ ಮಂಗಳವಾರ ಉತ್ತಮ ಒಳ ಹರಿವು ಇತ್ತು, 32425 ಕ್ಯೂಸೆಕ್ಸ್ ನೀರು ಹರಿದು ಬಂದಿತ್ತು, ಆದರೆ ಇಂದು ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ..

ಮೂರು ದಿನದ ಸರಾಸರಿ..

ಸೋಮವಾರ ಒಳ ಹರಿವು: 39348 ನೀರಿನ ಮಟ್ಟ: 149.5 ಅಡಿ

ಮಂಗಳವಾರ ಒಳ ಹರಿವು: 31425 ಕ್ಯೂಸೆಕ್ಸ್ ನೀರಿನ ಮಟ್ಟ: 152.9 ಅಡಿ

ಬುಧವಾರ ಒಳ ಹರಿವು: 24704 ಕ್ಯೂಸೆಕ್ಸ್ ನೀರಿನ ಮಟ್ಟ: 155.3 ಅಡಿ ಗರಿಷ್ಟ ಮಟ್ಟ : 186 ಅಡಿ..

ಮೇಲಿನ ಸರಾಸರಿ ನೋಡುವುದಾದರೆ ಮೂರು ದಿನಗಳಲ್ಲಿ 6ರಿಂದ 7ಅಡಿ ನೀರು ಬಂದಿದೆ, ಇದೇ ರೀತಿ ಮಳೆ ಆದರೆ ಇನ್ನೂ ಹತ್ತೇ ದಿನದಲ್ಲೇ ಡ್ಯಾಂ ಭರ್ತಿ ಆಗಬಹುದು ಎಂದು ಅಂದಾಜಿಸಲಾಗಿದೆ, ಭದ್ರಾ ಜಲಾಶಯಕ್ಕೆ ಒಳ ಹರಿವು ಕಮೇಣ ಹೆಚ್ಚಾಗುತ್ತಿದ್ದು, ಜಿಲ್ಲೆಯ ಅಚ್ಚುಕಟ್ಟು ಭಾಗದ ರೈತರಲ್ಲಿ ಭರವಸೆ ಮೂಡಿಸಿದೆ. ಮಲೆನಾಡಿನಲ್ಲಿ ಆಗುವ ಮಳೆಯ ಮೇಲೆ ಎಲ್ಲವೂ ಅವಲಂಬಿತವಾಗಿದೆ.

65 ಸಾವಿರ ಹೆಕ್ಟೇರ್‌ನಷ್ಟು ಭತ್ತ..!

ಜಿಲ್ಲೆಯ ಒಟ್ಟು 2.65 ಲಕ್ಷ ಎಕರೆ ಅಚ್ಚುಕಟ್ಟಿನಲ್ಲಿ ಶೇ. 65ರಷ್ಟು ಪ್ರದೇಶ ದಾವಣಗೆರೆ ಜಿಲ್ಲೆಯಲ್ಲೇ ಇದೆ. 65 ಸಾವಿರ ಹೆಕ್ಟೇರ್‌ನಷ್ಟು ಭತ್ತ ಬೆಳೆಯಲಾಗುತ್ತದೆ. ಜಲಾಶಯ ತುಂಬಿದರೆ ದಾವಣಗೆರೆ ಭಾಗದ ರೈತರಿಗೆ ಜೀವ ಬಂದಂತೆ ಆಗುತ್ತದೆ. ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಅಚ್ಚುಕಟ್ಟು ಭಾಗದ ರೈತರು ಭತ್ತದ ಸಸಿಮಡಿಗಳನ್ನು ಮಾಡಿಕೊಂಡು ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಮೊದಲು ಮಳೆ ಕೈ ಕೊಟ್ಟಿದ್ದರಿಂದ ರೈತರಿಗೆ ಬರಸಿಡಿಲು ಬಡಿದಂತಾಗಿತ್ತು, ಆದರೆ ಪುಷ್ಯ ಮಳೆ ರೈತನನ್ನು ಕೈ ಹಿಡಿದಿದೆ ಎಂದರೆ ತಪ್ಪಾಗಲಿಕ್ಕಿಲ್ಲ..

ಭಾಷೆ ಕೊಟ್ಟ ಮಳೆ ಪುಷ್ಯ.!

ಪುಷ್ಯ ಮಳೆ ಭಾಷೆ ಕೊಟ್ಟ ಮಳೆ ಎಂದೇ ಫೇಮಸ್ಸು, ಎಂದಿಗೂ ತಪ್ಪಿಸೋದಿಲ್ಲ, ಹಿರೇ ಪುಷ್ಯ, ಚಿಕ್ಕ ಪುಷ್ಯ ಮಳೆಗಳು ರೈತನ ಮಿತ್ರ ಎಂದೇ ಹೇಳಲಾಗುತ್ತದೆ, ಈ ಮಳೆಗಳು ಕೈ ಕೊಟ್ಟ ಉದಾಹರಣೆಗಳೇ ಕಡಿಮೆ, ಸದ್ಯ ಈ ವರ್ಷದಲ್ಲಿ ಬೇರೆ ಮಳೆ ಕೈ ಕೊಟ್ಟಿದ್ದವು, ಆದರೆ ಪುಷ್ಯ ಮಳೆ ರೈತರಿಗೆ ಮತ್ತೆ ಜೀವ ಕಳೆ ತಂದಿದೆ, ಇನ್ನೂ ಆಗಸ್ಟ್ ಮೂರರಿಂದ ಅಸಲಿ(ಆಸ್ಲೇಷ) ಮಳೆ ಶುರುವಾಗಲಿದೆ, ಅಸಲಿ ಮಳೆ ಕೈ ತುಂಬಾ ಬೆಳೆ ಎಂಬ ಗಾದೆಯಂತೆ ಹೆಚ್ಚಾಗಿ ಮಳೆ ಬರಲಿ ಡ್ಯಾಂ ತುಂಬಲಿ ಎಂಬುದು ರೈತರ ಪ್ರಾರ್ಥನೆ ಯಾಗಿದೆ, ಇನ್ನೂ ಪ್ರತಿನಿತ್ಯ ರೈತರು ಬೆಳಿಗ್ಗೆ ಡ್ಯಾಂಗೆ ಎಷ್ಟು ನೀರು ಬಂತು ಎಂದು ಪೇಪರ್, ಟಿವಿ ನೋಡುವುದು, ವಾಟ್ಸಾಪ್ ಚೆಕ್ ಮಾಡುವುದನ್ನ ರೂಢಿ ಮಾಡಿಕೊಂಡಿದ್ದಾರೆ, ಒಳ ಹರಿವು ಹೆಚ್ಚಾಗುತ್ತಿರುವುದರಿಂದ ಖುಷಿಗೊಂಡಿದ್ದು, ಆದರೆ ರೈತರಿಗೆ ಆತಂಕ ಮಾತ್ರ ಇನ್ನೂ ದೂರವಾಗಿಲ್ಲ..

ನಾಟಿಗೆ ಎದುರು ನೋಡುತ್ತಿರುವ ರೈತ..!

ಕೊಳವೆಬಾವಿ ನೀರು ಲಭ್ಯ ಇರುವವರು ನಾಟಿ ಮಾಡಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜುಲೈ ಮಧ್ಯದ ಹೊತ್ತಿಗೆ ಜಲಾಶಯ ಭರ್ತಿಯಾಗಿತ್ತು. ಈ ಹೊತ್ತಿಗೆ ಡ್ಯಾಂ ಭರ್ತಿಯಾಗಿ ನೀರನ್ನು ಹೊರ ಬಿಡಲಾಗಿತ್ತು, ಈ ವೇಳೆ ಆಗಲೇ ನಾಟಿ ಕಾರ್ಯವೂ ಚುರುಕಾಗಿತ್ತು. ಈ ವರ್ಷ ಸ್ವಲ್ಪ ವಿಳಂಬವಾಗಿದೆ. ಆದರೂ ಈ ತಿಂಗಳು ಅಂತ್ಯದವರೆಗೆ ನಾಲೆಗೆ ನೀರು ಬಿಟ್ಟರೂ ಸಮಸ್ಯೆ ಆಗುವುದಿಲ್ಲ, ಆಗಸ್ಟ್ ಮೊದಲ ವಾರದಲ್ಲಿ ನಾಟಿ ಕಾರ್ಯ ಶುರು ಮಾಡಲು ರೈತರ ಸಿದ್ದತೆ ನಡೆಸಿದ್ದಾರೆ, ಬೋರ್ ವೆಲ್ ಇರುವವರು ಈಗಾಗಲೇ ನಾಟಿ ಮಾಡುತ್ತಿದ್ದಾರೆ..

ಆಗಸ್ಟ್ ಒಂದಕ್ಕೆ ನೀರು ಹರಿಸಿ..!

ಮಧ್ಯ ಕರ್ನಾಟಕದ ರೈತರ ಜೀವನಾಡಿ ಭದ್ರಾ ಜಲಾಶಯಕ್ಕೆ ಕಳೆದ ಒಂದು ವಾರದಿಂದ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಆಗಸ್ಟ್ ೧ ರಿಂದಲೇ ನಾಲೆಗಳಿಗೆ ನೀರು ಬಿಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ರೈತ ಮುಖಂಡ ನಾಗೇಶ್ವರ್ ರಾವ್ ಒತ್ತಾಯಿಸಿದ್ದಾರೆ..

ಭದ್ರಾ ಜಲಾಶಯದಲ್ಲಿ ಇಂದಿನ ಒಳ ಹರಿವು ಹೆಚ್ಚಾಗಿದೆ ನೀರಿನ ಮಟ್ಟ 155.3 ಅಡಿ ಇದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ಜಿಲ್ಲೆಯ ಅರ್ಧದಷ್ಟು ರೈತರು ಬೇರೆ ಮೂಲಗಳ ನೀರು ಬಳಸಿ, ಭತ್ತದ ಸಸಿ ಬೆಳಸಿಕೊಂಡಿದ್ದಾರೆ. ಇನ್ನುಳಿದ ಅರ್ಧದಷ್ಟು ರೈತರು ಭದ್ರಾ ನೀರು ಹರಿಸಿದ ಮೇಲೆ ಬೀಜ ಚೆಲ್ಲುವವರಿದ್ದಾರೆ. ಇದರಿಂದ ಮುಂಗಡವಾಗಿ ಸಸಿ ಬೆಳಸಿಕೊಂಡವರಿಗೂ ತಡವಾಗಿ ಸಸಿ ಬೆಳಸಿಕೊಳ್ಳುವವರಿಗೂ 2 ತಿಂಗಳ ಅವಧಿಯ ಅಂತರವಾಗುತ್ತದೆ. ಮುಂದೆ ಭತ್ತ ಕಟಾವು ಅವಧಿಯಲ್ಲಿ 2 ತಿಂಗಳು ಹೆಚ್ಚುವರಿಯಾಗಿ ನೀರು ಹರಿಸಬೇಕಾಗುತ್ತದೆ. ಆದ್ದರಿಂದ ಆಗಸ್ಟ್ 1ರೊಳಗೆ ನಾಲೆಗಳಿಗೆ ನೀರು ಬಿಡಬೇಕು ಎಂದು ಒತ್ತಾಯಿಸಿದ್ದಾರೆ..

ಭದ್ರಾ ಡ್ಯಾಂನ ಕಳೆದ 60 ವರ್ಷಗಳ ಇತಿಹಾಸ ಪರಿಶೀಲಿಸಿದಾಗ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ತುಂಬಿರುವ ಉದಾಹರಣೆ ಹೆಚ್ಚು ಇದೆ. ಇದು ಮಳೆಗಾಲವಾಗಿರುವುದರಿಂದ ನೀರಿನ ಸಂಗ್ರಹ ನೋಡಿಕೊಂಡು ವೇಳಾಪಟ್ಟಿ ಪ್ರಕಾರ ನೀರು ಹರಿಸಿದರೂ ನಡೆಯುತ್ತದೆ. ಬೇಸಿಗೆಯಲ್ಲಿ ಮಾತ್ರ ನಿರಂತರ ನೀರು ಹರಿಸಬೇಕು. ನೀರಾವರಿ ಇಲಾಖೆ 2 ಹಂಗಾಮಿನಲ್ಲಿಯೂ ನೀರಿನ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು, ಈಗ ವಿಶ್ವದಾದ್ಯಂತ ಅಕ್ಕಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಹೆಚ್ಚಳವಾಗುವ ಸಂಭವವಿದೆ. ಪ್ರಪಂಚದ ಅಕ್ಕಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡ 40ರಷ್ಟು ಇದೆ. ಕಳೆದ 2022-23ನೇ ಸಾಲಿನಲ್ಲಿ ನಮ್ಮ ದೇಶದಿಂದ ವಿದೇಶಗಳಿಗೆ 42.12 ಲಕ್ಷ ಟನ್ ಅಕ್ಕಿ ರಪ್ತು ಆಗಿದೆ. ಈಗ ಕೇಂದ್ರ ಸರ್ಕಾರ ಬಾಸ್ಮತಿ ಅಕ್ಕಿ ಹೊರತುಪಡಿಸಿ ಇನ್ನುಳಿದ ಎಲ್ಲಾ ನಮೂನೆಯ ಅಕ್ಕಿ ರಪ್ತುನ್ನು ನಿಷೇಧಿಸಿದೆ. ಯಾವುದೇ ಅಡೆತಡೆ ಇಲ್ಲದೆ ನಿಗದಿತ ದರದಲ್ಲಿ ನಮ್ಮ ದೇಶದ ಜನರಿಗೆ ಅಕ್ಕಿ ಪೂರೈಕೆಯಗಬೇಕು ಮತ್ತು ಮೊದಲು ನಮ್ಮ ದೇಶದ ಜನರಿಗೆ ಊಟ, ಆಮೇಲೆ ವ್ಯಾಪಾರ ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಆದರೆ ಇದರಿಂದ ಭತ್ತಕ್ಕೆ ಚಿನ್ನದ ಬೆಲೆ ಸಿಗುವ ಅವಕಾಶ ಕೈ ತಪ್ಪುವ ಸಾಧ್ಯತೆಗಳಿವೆ. ಆದ್ದರಿಂದ ಅಕ್ಕಿ ರಫ್ತು ನಿಷೇಧ ಹಿಂಪಡೆದು, ಪ್ರಸ್ತುತ ಟೊಮೆಟೊಗೆ ಸಿಕ್ಕ ಚಿನ್ನದ ಬೆಲೆ ಭತ್ತಕ್ಕೂ ಸಿಗುವಂತೆ ಮಾಡಬೇಕು. ಅನೇಕ ವರ್ಷಗಳಿಂದ ಬಸವಳಿದು ಭತ್ತ ಬೆಳೆದು ದೇಶದ ಜನರಿಗೆ ಅನ್ನ ನೀಡಿದ ಅನ್ನದಾತ ರೈತರಿಗೆ ಒಂದು ಸುವರ್ಣಾವಕಾಶ ಸಿಗುವಂತೆ ಮಾಡಬೇಕು ಎಂದಿದ್ದಾರೆ..

ಕಳೆದ ವರ್ಷ ಜುಲೈ ೬ ರಂದೇ ಭದ್ರಾ ನಾಲೆಯಿಂದ ನೀರು ಹರಿಸಲಾಗಿತ್ತು. ಈ ಬಾರಿ ಮಳೆ ತಡವಾಗಿದೆ ಆದ ಕಾರಣ ಆಗಸ್ಟ್ ೧ ರಂದು ನೀರು ಹರಿಸಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಮುಂದೆ ಚಳಿಗಾಲ ಬಂದರೆ ೪೦ಚೀಲ ಅಕ್ಕಿ ಬದಲಿಗೆ ಕೇವಲ ೧೫ ರಿಂದ ೨೦ ಚೀಲ ಇಳುವರಿ ಬರಲು ಸಾಧ್ಯವಾಗುತ್ತದೆ ಆದ್ದರಿಂದ ಆ. ೧ ರೊಳಗೆ ನೀರು ಹರಿಸಿದರೆ ಭತ್ತ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ..

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿಎಂ ಸತೀಶ್, ಮಳಲ್ಕೆರೆ ಸದಾನಂದ, ಅನೇಕಲ್ಲು ವಿಜಯಕುಮಾರ್, ಹೊಸಹಳ್ಳಿ ಶಿವಮೂರ್ತಿ, ತುರ್ಚಘಟ್ಟದ ಪುಟ್ಟರಾಜು, ಗೋಣಿವಾಡದ ಪಿ.ಎ ನಾಗರಾಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು...