POWER SAMACHARA | KANNADA NEWS | BREKING NEWS| 29-06-2023..

ದಾವಣಗೆರೆ: ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿರುವರನ್ನು ದಾವಣಗೆರೆ ಎಪಿಎಂಸಿ ಮಾಜಿ ಅಧ್ಯಕ್ಷರು ಮತ್ತು ಸದಸ್ಯರುಗಳು ಸ್ವಾಗತಿಸಿದೆ..

ಈ ಕುರಿತು ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಮರಣ ಶಾಸನ ಬರೆದಿತ್ತು. ಇಂತಹ ರೈತ ವಿರೋಧಿ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂಪಡೆದು ರೈತರು ಸ್ವಾವಲಂಬಿ ಬದುಕು ನಡೆಸಲು ಸ್ಫೂರ್ತಿ ನೀಡಿದೆ ಎಂದರು.

ದಾವಣಗೆರೆ ಎಪಿಎಂಸಿ ಒಂದರಲ್ಲೇ ರೈತರಿಗೆ ಅನೇಕ ಅನುಕೂಲಗಳಾಗಿದ್ದು, ದಾವಣಗೆರೆ ತಾಲ್ಲೂಕಿನ ಮುಖ್ಯ ಮಾರುಕಟ್ಟೆ ಸೇರಿದಂತೆ ಮಾಯಕೊಂಡ, ಹದಡಿ, ಹಳೇ ಬಿಸಲೇರಿ, ತುರ್ಚಘಟ್ಟ, ಬೆಳವನೂರು, ಕುಕ್ಕವಾಡ, ಕಕ್ಕರಗೊಳ್ಳ ಗ್ರಾಮಗಳಲ್ಲಿ ಗೋದಾಮುಗಳನ್ನು ನಿರ್ಮಿಸಲಾಗಿದೆ. ಈ ಗೋದಾಮುಗಳಲ್ಲಿ ರೈತರು ತಮ್ಮ ದಾಸ್ತಾನು ಮಾಡಲು ಅವಕಾಶವಿದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ, ಎಪಿಎಂಸಿ ಕಾಯ್ದೆ ಜಾರಿ ಆಗಿದ್ದರೆ ರೈತರಿಗೆ ಯಾವುದೇ ತರದಲ್ಲೂ ಅನುಕೂಲವಾಗುತ್ತಿರಲಿಲ್ಲ. ಅದಾನಿಯೋ, ಅಂಬಾನಿಯೋ ರೈತರು ಬೆಳೆದ ಬೆಳೆಗಳನ್ನು ತಮ್ಮ ಇಷ್ಟದ ದರಕ್ಕೆ ಖರೀದಿಸುತ್ತಾರೆ. ಇದರಿಂದ ರೈತರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದರು ಎಂದರು.

ರೈತರಿಗೆ ಅವರು ಬೆಳೆದ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಿಕೊಳ್ಳುವುದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಗೋದಾಮು ಮತ್ತು ಮಾರುಕಟ್ಟೆ ಪ್ರಾಂಗಣದಲ್ಲಿಯೂ ಸಹಾ ಗೋದಾಮುಗಳನ್ನು ನಿರ್ಮಿಸಲಾಗಿರುತ್ತದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದಕ್ಕೆ ಈ ಹಿಂದಿನಿಂದಲೂ ಅವಕಾಶವಿರುತ್ತದೆ ಎಂದರು.

ರೈತರು ಕೃಷಿ ಉತ್ಪನ್ನಗಳ ಮಾರಾಟ ಮಾಡುವ ಸಮಯದಲ್ಲಿ ದೈನಂದಿನ ಧಾರಣೆ ಮಾಹಿತಿಯನ್ನು ತಾವುಗಳೇ ನೇರವಾಗಿ ಕೃಷಿ ಮಾರಾಟ ನೋಡಿಕೊಳ್ಳಬಹುದಾಗಿರುತ್ತದೆ. ವೆಬ್ ಸೈಟ್ ಮೂಲಕ ಎಲ್ಲಾ ಮಾರುಕಟ್ಟೆಗಳ ಧಾರಣೆಗಳನ್ನು ನೋಡಿಕೊಳ್ಳಬಹುದು ಎಂದರು.

ರೈತರು ಮಾರುಕಟ್ಟೆಗೆ ತಂದು ಮಾರಾಟ ಮಾಡುವುದರಿಂದ ಸ್ಪರ್ಧಾತ್ಮಕ ಧಾರಣೆಗಳು ದೊರೆಯುತ್ತಿದ್ದು, ಮಾರುಕಟ್ಟೆ ಪ್ರಾಂಗಣದ ಹೊರಗಡೆ ಲೈಸೆನ್ಸ್ ಇಲ್ಲದ ವ್ಯಾಪಾರಸ್ತರು ರೈತರಿಗೆ ಬಿಲ್ಲುಗಳನ್ನು ನೀಡದೇ ಅವರಿಗೆ ಇಷ್ಟಬಂದ ರೀತಿಯಲ್ಲಿ ಧಾರಣೆಗಳನ್ನು ನೀಡಿ ಖರೀದಿಸುವುದನ್ನು ನಿಯಂತ್ರಿಸಬಹುದಾಗಿರುತ್ತದೆ.

ಕಾಯ್ದೆ ತಿದ್ದುಪಡಿಯು ಪುನಃ ಜಾರಿಯಾದರೆ ಸಮಿತಿಗೆ ತಾಲ್ಲೂಕು ವ್ಯಾಪ್ತಿಯ ಸಂಪೂರ್ಣ ವ್ಯಾಪಾರ-ವಹಿವಾಟಿನ ನಿಯಂತ್ರಣ ಸಿಗಲಿದ್ದು, ಸಮಿತಿಗೆ ಹೆಚ್ಚಿನ ಆದಾಯ ಬರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಸಂತೆಗಳು, ಗ್ರಾಮೀಣ ಗೋದಾಮುಗಳು, ಕಣಗಳನ್ನು ನಿರ್ಮಿಸಬಹುದಾಗಿರುತ್ತದೆ.

ಕಾಯ್ದೆ ತಿದ್ದುಪಡಿ ಪುನಃ ಜಾರಿಯಾದರೆ, ಸಮಿತಿಗೆ ಆದಾಯ ಹೆಚ್ಚಿಗೆಯಾಗಿ ಸರ್ಕಾರದ ಆವರ್ತ ನಿಧಿ ವಂತಿಗೆಗೆ ಮೊತ್ತವನ್ನು ತುಂಬಿ ರೈತರ ಉತ್ಪನ್ನಗಳಿಗೆ ಬೆಲೆ ಕಡಿಮೆಯಾದಾಗ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಕಾಯ್ದೆ ತಿದ್ದುಪಡಿಯಿಂದ ಮಾರುಕಟ್ಟೆ ಪ್ರಾಂಗಣದ ಹೊರಗಡೆ ಕೃಷಿ ಉತ್ಪನ್ನಗಳ ಅವಕ, ಧಾರಣೆ, ಬೆಲೆಗಳ ಮಾಹಿತಿ ದೊರಕುವುದಿಲ್ಲ. ಹಾಗೂ ಯಾವುದೇ ನಿಯಂತ್ರಣವನ್ನು ಮಾಡಲು ಸಾಧ್ಯವಾಗಿರುವುದಿಲ್ಲ. ಕಾಯ್ದೆ ತಿದ್ದುಪಡಿಯಾದರೆ ಸದರಿ ಸಂಪೂರ್ಣ ಮಾಹಿತಿ ಹಾಗೂ ನಿಯಂತ್ರಣವನ್ನು ಜಾರಿಮಾಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಸಲೇರಿ ಈರಣ್ಣ, ಕಕ್ಕರಗೊಳ್ಳ ಶಾಂತಾರಾಮ್, ದೊಗ್ಗಳ್ಳಿ ಬಸವರಾಜ್, ರಾಜಪ್ಪ ಬೇತೂರು ಉಪಸ್ಥಿತರಿದ್ದರು.