POWER SAMACHARA | KANNADA NEWS | BREKING NEWS| 13-02-2024
ದಾವಣಗೆರೆ : ಅವರು ಸಮಾಜದ ಪ್ರಗತಿಯಲ್ಲಿ ಧರ್ಮದ ಪಾತ್ರವನ್ನು ಒತ್ತಿ ಹೇಳಿದವರು. ಆದರೂ ಸುಧಾರಣೆ ಯಾವಾಗಲೂ ಧಾರ್ಮಿಕ ಪರಿಗಣನೆಯನ್ನು ಆಧರಿಸಿರಲಿಲ್ಲ. ಚಾಲ್ತಿಯಲ್ಲಿರುವ ಸಾಮಾಜಿಕ ಆಚರಣೆಗಳಿಗೆ ತರ್ಕಬದ್ಧ ಮತ್ತು ಜಾತ್ಯತೀತ ದೃಷ್ಟಿಕೋನವು ಹೆಚ್ಚು ಮುಖ್ಯವಾಗಿತ್ತು ಎನ್ನುವುದನ್ನೂ ಸಹ ತೋರಿಸಿ ಕೊಟ್ಟರು, ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾಗಿದ್ದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಪವಾಡ, ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜನದಂಬೆಯ ಆರಾಧಕರಾಗಿ ಇಡೀ ಜೀವಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲರು, ಇಂದಿಗೂ ಜನ ಮಾನಸದಲ್ಲಿ ಗುರುವಿನ ಸ್ಥಾನ ಪಡೆದಿದ್ದಾರೆ. ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿ ಮಾತು ಹೇಳಿದ್ದರು. ಬಂಜಾರ ಸಮುದಾಯದ ಆರಾಧ್ಯ ದೈವ, ಸಮಾಜ ಸುಧಾರಕ ಸದ್ಗುರು ಸಂತ ಸೇವಾಲಾಲರ ಕುರಿತಾದ ಒಂದು ವಿಶೇಷ ಸ್ಟೋರಿ ಇಲ್ಲಿದೆ..
ಹೌದು.. ಈ ನಮ್ಮ ದೇಶದ ನೆಲ, ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವಂತದ್ದು, ಈ ವೈವಿಧ್ಯತೆಯುಳ್ಳ ಸಂಸ್ಕೃತಿಗೆ ಹಲವಾರು ಸಾಂಸ್ಕೃತಿಕ ರಾಯಭಾರಿಗಳು ಕಾರಣೀಭೂತರಾಗಿದ್ದಾರೆ. ಭಾರತ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿನ ಅಂಧಕಾರವನ್ನೂ ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರುಗಳಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲರು ಅಗ್ರಗಣ್ಯರು. ಇಂತಹ ಸಂತರ ಸ್ತಬ್ಧಚಿತ್ರವನ್ನೂ ದಸರಾ ಉತ್ಸವದಲ್ಲಿ ಪ್ರದರ್ಶನ ಮಾಡಿದ್ದು ಸಮಾಜ ಸುಧಾರಕರಿಗೆ ಸಂದ ಗೌರವ ಎಂದರೆ ತಪ್ಪಾಗಲಿಕ್ಕಿಲ್ಲ..
ದಾವಣಗೆರೆಯಲ್ಲಿ ಜನಿಸಿದ ಸಂತ ಸೇವಾಲಾಲ್..
ಸಂತ ಸೇವಾಲಾಲರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಎಂಬಲ್ಲಿ ಶ್ರೀ ಭೀಮ ನಾಯಕ್, ಶ್ರೀಮತಿ ಧರ್ಮಿಣಿ ಯಾಡಿಯವರ ಮಗನಾಗಿ 15 ಫೆಬ್ರವರಿ 1739ರಲ್ಲಿ ಜನಿಸಿದರು. ಇವರು ಜನನವಾದ ಸೂರಗೊಂಡನ ಕೊಪ್ಪವನ್ನು ಭಾಯ್ ಗಢ ಎಂದು ಕರೆಯಲಾಗುತ್ತದೆ. ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನ ಪಡೆದರು. ಅಲ್ಲದೇ ಜಗದಂಬೆಯ ಆರಾಧಕರಾಗಿ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದರು. 18ನೇ ಶತಮಾನದಲ್ಲಿ ಲಂಬಾಣಿ ಜನಾಂಗದ ಹಕ್ಕಿಗಾಗಿ ಆಗಿನ ನಿಜಾಮರು ಹಾಗೂ ಮೈಸೂರು ಅರಸರೊಂದಿಗೆ ಹೋರಾಟ ಮಾಡಿದರು. ಲಂಬಾಣಿ ಸಮುದಾಯ ಸಾವಿರಾರು ವರ್ಷಗಳಿಂದ ನಗರ ಮತ್ತು ಗ್ರಾಮೀಣ ಜೀವನಗಳಿಂದ ದೂರವಿದ್ದು, ಅರಣ್ಯ ವಾಸಿಗಳಾಗಿ ಜೀವನ ಸಾಗಿಸುತ್ತಿದ್ದರು. ಇವರಲ್ಲಿನ ಅಜ್ಞಾನ ಅಂಧಕಾರಗಳನ್ನು ದೂರ ಮಾಡಿ ಜ್ಞಾನ ಮಾರ್ಗ ತೋರಿದ ಸೇವಾಲಾಲರನ್ನು ಬಂಜಾರರು ಮೋತಿವಾಳು ಅಥವಾ ಲಾಲ ಮೋತಿ ಎಂದು ಕರೆಯುತ್ತಿದ್ದರು. ಮುಂಬೈಯ ಸ್ಮಿತ್ ಭಾವುಚಾ ಎಂಬಲ್ಲಿ ಪೋರ್ಚುಗೀಸರ ಹಡಗು ಸಿಕ್ಕಿಹಾಕಿಕೊಂಡಾಗ ಅದನ್ನು ತಮ್ಮ ಜಾಣತನದಿಂದ ದಡ ಸೇರಿಸಿದ ಸೇವಾಲಾಲರಿಗೆ ಪೋರ್ಚುಗೀಸರು ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಆದ್ದರಿಂದಲೇ ಇವರನ್ನು ಮೋತಿವಾಳೋ ಎಂದು ಕರೆಯುತ್ತಿದ್ದರು. ಸೇವಾಲಾಲ ಮಹಾರಾಜರ ದೈವೀ ಶಕ್ತಿಯನ್ನು ತಿಳಿದು ಹೈದ್ರಾಬಾದಿನ ನಿಜಾಮ ಸೇವಾಲಾಲ ಮಹಾರಾಜರನ್ನು ಕರೆದು ಪಾದಪೂಜೆ ಮಾಡಿ, ಕಪ್ಪ ಕಾಣಿಕೆ ನೀಡಿದರು ಎಂಬ ಇತಿಹಾಸ ಇದೆ, ಹೈದ್ರಾಬಾದಿನ ಕೇಂದ್ರ ಸ್ಥಾನದಲ್ಲಿ ಅವರ ತಂಡ ನೆಲೆಯೂರಲು ಒಂದಿಷ್ಟು ಜಾಗವನ್ನು ಅರ್ಪಿಸುತ್ತಾನೆ. ಆ ಪ್ರದೇಶವನ್ನು ಈಗಲೂ ಬಂಜಾರಾ ಹಿಲ್ಸ್ ಎಂದು ಕರೆಯುತ್ತಾರೆ. ಇದು ಪ್ರಸಿದ್ದಿ ಪಡೆದ ಪ್ರೇಕ್ಷಣೀಯ ಸ್ಥಳ ಕೂಡ ಆಗಿದೆ..
ಮರಿಯಮ್ಮ ದೇವಿ ಕೃಪೆ..
ಸೇವಾಲಾಲರು ಸೂರಗೊಂಡನಕೊಪ್ಪದಲ್ಲಿ ಭೀಮಾನಾಯಕ ಧರ್ಮಿಣಿಬಾಯಿಯವರ ಉದರದಲ್ಲಿ ಜನಿಸಿದರು. ರಾಮಸಿ ರಾಮಾವತ್ (ರಾಥೋಡ್) ಗೋತ್ರದ ರಾಮಜಿನಾಯಕರ ಹಿರಿಯ ಮಗ ಭೀಮಾನಾಯಕ. ಭೀಮಾನಾಯಕ ಧರ್ಮೀಣಿಬಾಯಿ ಮದುವೆಯಾದ 12 ವರ್ಷಗಳ ನಂತರ ಮರಿಯಮ್ಮ ದೇವಿಯ ಕೃಪೆಯಿಂದ ಸೇವಾಲಾಲರು ಜನಿಸುತ್ತಾರೆ. ನಂತರ ಹಾಪಾ, ಬದ್ದು, ಪೂರಾ ಎಂಬ ಮಕ್ಕಳು ಜನಿಸುತ್ತಾರೆ. ಸೇವಾಲಾಲರಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತ್ತನ್ನು ಈಡೇರಿಸಬೇಕೆಂದು ಧರ್ಮಿಣಿಬಾಯಿಯವರ ಕನಸಿನಲ್ಲಿ ಬಂದು ಸೇವಾಲಾಲರನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ. ಭೀಮಾನಾಯಕ ದಂಪತಿಯ ಮುದ್ದಿನ ಮಗ ಸೇವಾಲಾಲ್ ಆಗಿದ್ದರು, ಹೀಗಾಗಿ ದೇವಿ ಭೀಮಾನಾಯಕನಿಗೆ ನೀಡಿದ ಸೂಚನೆಯಂತೆ ಹರಕೆ ಈಡೇರಿಸಲು ಕೇಳಿದರೂ ಭೀಮಾನಾಯಕ ಹಿಂದೇಟು ಹಾಕಿರುತ್ತಾರೆ. ಇತ್ತ ಸೇವಾಲಾಲರು ಸದಾ ಭಗವಂತನ ಧ್ಯಾನದಲ್ಲಿ ನಿರತರಾಗಿರುತ್ತಾರೆ. 12 ವರ್ಷಗಳಾದರೂ ಭೀಮಾನಾಯಕ ಹರಕೆ ತೀರಿಸದೆ ಇರುವುದರಿಂದ ಮರಿಯಮ್ಮ ದೇವಿ ಕುಪಿತಗೊಳ್ಳುತ್ತಾಳೆ. ಇದರಿಂದಾಗಿ ಭೀಮಾನಾಯಕನಿಗೆ ವಿವಿಧ ಕಂಟಕಗಳು ಬರಲಾರಂಭಿಸುತ್ತದೆ. ಹಲವಾರು ದನಗಳು ಕಣ್ಮರೆಯಾಗುತ್ತವೆ. ಹೀಗಾಗಿ ಬೇರೆ ದಾರಿ ಇಲ್ಲದೇ ಸೇವಾಲಾಲರು ಸೇವೆಗೆ ಬಂದರು ಎಂದು ಹೇಳಲಾಗಿದೆ..
ಸೇವಾಲಾಲ ಮಹಾರಾಜರ ಬಾಲ್ಯಜೀವನ ಹೀಗಿತ್ತು..
ಸೇವಾಲಾಲ ಮಹಾರಾಜರು ಬಾಲಕನಾಗಿ ಬೆಳೆಯುತ್ತಿದ್ದಾಗ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ತನ್ನ ಸಹಪಾಠಿಗಳೊಂದಿಗೆ ಆಟವಾಡುತ್ತಾ ಪವಾಡಗಳನ್ನ ತೋರುತ್ತಿದ್ದರು. ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯಿಂದಾಗಿ ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು, ಹೀಗೆ ಹಲವಾರು ಪವಾಡಗಳನ್ನು ಮಾಡುತ್ತಾ ಬಂಜಾರಾ ಸಮುದಾಯದ ಆರಾಧ್ಯ ದೈವರಾದರು.
ಸೇವಾಲಾಲರ ಪ್ರಮುಖ ಸುಧಾರಣೆಗಳು..
ಸೇವಾಲಾಲರು ವಿಶೇಷವಾಗಿ ಅರಣ್ಯವಾಸಿಗಳು ಮತ್ತು ಅಲೆಮಾರಿ ಬುಡಕಟ್ಟುಗಳಿಗೆ ಸೇವೆ ಸಲ್ಲಿಸಲು ಅವರು ತಮ್ಮ ಲಾಡೆನಿಯಾ ತಂಡದೊಂದಿಗೆ ದೇಶಾದ್ಯಂತ ಪ್ರಯಾಣಿಸಿದರು. ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಅವರ ಅಸಾಧಾರಣ ಜ್ಞಾನ, ಅತ್ಯುತ್ತಮ ಕೌಶಲ್ಯ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಿಂದಾಗಿ ಅವರು ಬುಡಕಟ್ಟು ಸಮುದಾಯಗಳಲ್ಲಿ ಪ್ರಚಲಿತದಲ್ಲಿರುವ ಪುರಾಣ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ಮತ್ತು ನಿರ್ಮೂಲನೆ ಮಾಡಲು ಹಾಗೂ ಅವರ ಜೀವನ ವಿಧಾನದಲ್ಲಿ ಸುಧಾರಣೆಗಳನ್ನು ತಂದರು. ಅಂತಹ ಸಮುದಾಯಗಳ ನಡುವೆ, ಬಂಜಾರ ಸಮುದಾಯವು ದೇಶಾದ್ಯಂತ ವಿವಿಧ ಹೆಸರುಗಳೊಂದಿಗೆ ನೆಲೆಸಿದೆ, ತಮ್ಮ ಅಲೆಮಾರಿ ಜೀವನಶೈಲಿಯನ್ನು ಶಾಶ್ವತವಾಗಿ ತ್ಯಜಿಸಿ ತಾಂಡಾಗಳನ್ನೂ ಮಾಡಿಕೊಂಡು ನೆಲೆಸಿದ್ದಾರೆ.
ಸೇವಾಲಾಲ್ ಸಂತರು ವೃತ್ತಿಯ ಮೂಲಕ ಪಶು ಸಾಕಣೆ ಹಾಗೂ ಸಂಗೋಪನೆ ಮಾಡುವ ವ್ಯಕ್ತಿ. ಅವರು ಸಂಗೀತಗಾರ, ದೈರ್ಯಶಾಲಿ ಯೋಧ, ಮೂಢನಂಬಿಕೆ ವಿರುದ್ದ ಹೋರಾಡಿದ ವಿವೇಚನಾಶೀಲ ವ್ಯಕ್ತಿಯಂದು ಹಾಗೂ ಜಗದಂಬಾ ದೇವಿಯ ಭಕ್ತರು ಆಗಿದ್ದರು ಎಂದು ಹೇಳಲಾಗುತ್ತಿದೆ. ವಸಾಹತುಶಾಹ ಬ್ರಿಟಿಷ್ ಆಡಳಿತಗಾರರು ತಮ್ಮ ಕಥೆಗಳನ್ನು ಇವರ ಬಗ್ಗೆ ಉಲ್ಲೇಖಿಸುತ್ತಾರೆ. ಆದರೆ ಅವರು ೧೯ನೇ ಶತಮಾನದಲ್ಲಿ ಇಟ್ಟು ಅವರ ಮೂಲ ಹೆಸರನ್ನು ಸೆವ ರಾಥೋಡ್ ಎಂದು ಗುರುತಿಸುತ್ತಾರೆ. ಸೇವಾಲಾಲ್ ಒಬ್ಬ ದನಗಾಯಿ ಗೋಪಾಲಕನಾಗಿ ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು. ಇದಲ್ಲದೆ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ, “ದಾರು, ಗಾಂಜಾ ಮತ್ ಪೀವೋ” ಎಂದು ವ್ಯಸನಗಳಿಂದ ದೂರವಿರಿ ಎಂದು ಸಾರಿದರು, “ಕಾಮ ಕ್ರೋಧೇರಿ ಧೂಣಿ ಬಾಳೋ” ಎಂಬ ವಾಕ್ಯ ಹೇಳುತ್ತಾ ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿರಿ ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ಹೇಳಿದರು. ಸೇವಾ ಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು. ತನ್ನ ಸಮಾಜದ ಜನರ ಕಷ್ಟಕ್ಕಾಗಿ ತಮ್ಮ ಪ್ರಾಣಾರ್ಪಣೆಗೂ ಸಿದ್ದರಾಗಿದ್ದರು.
ಮಾಲೆ ಧರಿಸುವ ಯುವ ಪಡೆ
ಇನ್ನೂ ಸೇವಾಲಾಲರು ಹುಟ್ಟಿದ ಸ್ಥಳ ದಾವಣಗೆರೆಯ ಹೊನ್ನಾಳಿ, ನ್ಯಾಮತಿ ತಾಲ್ಲೂಕಿನ ಸೂರೆಗೊಂಡನಕೊಪ್ಪ ಭಾಯಗಢದಲ್ಲಿ ಪ್ರತಿ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಸೇವಾಲಾಲ್ ಜಯಂತಿ ಮಾಡಲಾಗುತ್ತೆ, ಆಗ ಬಂಜಾರ ಸಮುದಾಯದ ಯುವಕರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದಂತೆ ಇಲ್ಲಿಯೂ ಸಹ ಮಾಲೆ ಧರಿಸಿಕೊಂಡು ಬಂದು ಹರಕೆ ತೀರಿಸುತ್ತಾರೆ, ಜೊತೆಗೆ ಸೇವಾಲಾಲರು ಹಾಕಿದ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಾರೆ, ದುಶ್ಚಟಗಳಿಂದ ದೂರು ಇರುವುದು, ಒಳ್ಳೆಯ ಕೆಲಸಗಳನ್ನೂ ಮಾಡಲು ಪಣ ತೊಟ್ಟು ಮಾಲೆ ಧರಿಸಿ ಬಂದು ಭಕ್ತಿ ಸಮರ್ಪಣೆ ಮಾಡುತ್ತಾರೆ..
ಅಭಿವೃದ್ದಿಗೆ ಹಲವರ ಶ್ರಮ
ಇನ್ನೂ ಸೇವಾಲಾಲರು ಹುಟ್ಟಿದ ಸ್ಥಳ ಹೊನ್ನಾಳಿ ನ್ಯಾಮತಿ ತಾಲ್ಲೂಕಿನ ಸೂರೆಗೊಂಡನಕೊಪ್ಪ ಹಲವು ಗುಡ್ಡಗಳ ಮಧ್ಯೆ ಇದೆ ಎಂದು ಭಾಸವಾಗುತ್ತದೆ, ಸೂರಗೊಂಡನಕೊಪ್ಪದಲ್ಲಿ ಹಲವು ಅಭಿವೃದ್ದಿ ಕೆಲಸಗಳು ನಡೆದಿವೆ, ಸೇವಾಲಾಲ್ ಹಾಗೂ ಮರಿಯಮ್ಮ ದೇವಸ್ಥಾನಗಳ ಜೊತೆಯಲ್ಲಿ ಸುತ್ತಾ ಪಾರ್ಕ್ ಎಲ್ಲರನ್ನೂ ಆಕರ್ಷಣೆ ಮಾಡುವಂತೆ ನಿರ್ಮಾಣ ಆಗಿದೆ, ಇನ್ನೂ ಪ್ರಮುಖವಾಗಿ ಸಮಾಜ ಸುಧಾರಕ ಸಂತ ಸೇವಾಲಾಲ್ ಸ್ಥಬ್ದ ಚಿತ್ರವನ್ನೂ ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅದ್ಭುತವಾಗಿ ತಯಾರಿಸಿ ಈ ಭಾರೀಯ ಮೈಸೂರು ದಸರಾದಲ್ಲಿ ಮೆರವಣಿಗೆ ನಡೆಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳಿಯ ಹೊನ್ನಾಳಿ ಶಾಸಕ ಡಿಜಿ ಶಾಂತನಗೌಡ, ಸೇವಾಲಾಲ್ ಕ್ಷೇತ್ರ ನಮ್ಮ ತಾಲ್ಲೂಕಿನಲ್ಲಿ ಇದೆ ಎಂಬುದು ನಮಗೆ ಹೆಮ್ಮೆ.. ಮೊದಲ ಭಾರೀಗೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನವರು ಸೂರಗೊಂಡನಕೊಪ್ಪವನ್ನೂ ಅಭಿವೃದ್ದಿಗೊಳಿಸಿದ್ದರು, ಜೊತೆಗೆ ರುದ್ರಪ್ಪ ಲಮಾಣಿ, ರೂಪ್ಲಾನಾಯ್ಕ್, ಪರಮೇಶ್ವರ್ ನಾಯಕ್, ಗೋವಿಂದನಾಯ್ಕ್. ಬಸವನಗೌಡ, ಈಶ್ವರ ನಾಯ್ಕ್, ಈರ್ಯಾ ನಾಯ್ಕ್, ಬೋಜಾನಾಯ್ಕ್ ಸೇರಿದಂತೆ ಹಲವರು ಭಾಯ್ ಗಢದ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದು ಸ್ಥಳಿಯ ಹೊನ್ನಾಳಿ ಶಾಸಕ ಡಿಜೆ ಶಾಂತನಗೌಡರು ಅಭಿಪ್ರಾಯಿಸಿದ್ದಾರೆ..
ಮಹಾರಾಷ್ಟ್ರದಲ್ಲಿ ಸೇವಾಲಾಲ್ ಐಕ್ಯ..!
ಇನ್ನೂ ಸೇವಾಲಾಲ್ ಮಹಾರಾಜರು ಸೇವಾಲಾಲರು 1806ರ ಡಿಸೆಂಬರ್ 4ರಂದು ನಿಧನರಾದರು ಎಂದು ಹೇಳಲಾಗುತ್ತದೆ, ರುಹಿಗಢ್ (ಯವತ್ಮಾಲ್ ಜಿಲ್ಲೆ) ನಲ್ಲಿ ನಿಧನರಾದರು ಮತ್ತು ಈಗ ಮಹಾರಾಷ್ಟ್ರ ರಾಜ್ಯದಲ್ಲಿರುವ ವಾಶಿಮ್ ಜಿಲ್ಲೆಯ ಪೊಹರಗಢದಲ್ಲಿ ಸಮಾಧಿ ಮಾಡಲಾಗಿದೆ, ಜಗದಂಬಾ ದೇವಿಗೆ ಸಮರ್ಪಿತವಾದ ದೇವಾಲಯದ ಪಕ್ಕದಲ್ಲಿ ಅವರ ಸಮಾಧಿ ಇನ್ನೂ ನಿಂತಿದೆ. ಅವರು ವ್ಯಕ್ತಿತ್ವ ಆರಾಧನೆಗಳು ಮತ್ತು ಆಚರಣೆಗಳನ್ನು ವಿರೋಧಿಸಿದರೂ, ದೀಪಾವಳಿಯಂತಹ ಹಿಂದೂ ಹಬ್ಬಗಳಲ್ಲಿ ಇದು ಬಂಜಾರರಿಗೆ ಜನಪ್ರಿಯ ತಾಣವಾಗಿದೆ . ಸೇವಾಲಾಲ್ ಮತ್ತು ಜಗದಂಬಾಗೆ ಸಮರ್ಪಿತವಾದ ಇದೇ ರೀತಿಯ ದೇವಾಲಯಗಳು ಬೇರೆಡೆ ಅಸ್ತಿತ್ವದಲ್ಲಿವೆ ಮತ್ತು ಗಮನಾರ್ಹ ಸಂಖ್ಯೆಯಲ್ಲಿ ಆರಾಧಕರನ್ನು ಆಕರ್ಷಿಸುತ್ತವೆ.
ಒಟ್ಟಾರೆ ಸದ್ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ ಗತಿಸಿ 285 ಕ್ಕೂ ಹೆಚ್ಚು ವರ್ಷಗಳೇ ಕಳೆದಿವಿ ಆದರೆ ಅವರ ಸಮಾಜ ಸುಧಾರಣೆ ಕೆಲಸಗಳು ಜನರ ಮನಸ್ಸಿನಲ್ಲಿ ಹಚ್ಚಳಿಯದೇ ಉಳಿದಿವಿ, ಇಂತಹ ಮಹಾನ್ ಸಂತ ನಮ್ಮ ನಾಡಿನಲ್ಲಿ ನೆಲೆಸಿದ್ದರು ಎಂಬುದೇ ನಮಗೆ ಹೆಮ್ಮೆಯ ವಿಚಾರ. ಇವರಂತೆ ಹಲವು ಮಹನೀಯರ ವಿಚಾರಧಾರೆಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಅವರ ಜೀವನ ಮೌಲ್ಯಗಳು ಅರ್ಥಪೂರ್ಣವಾಗುತ್ತದೆ. ಇಂತಹ ಮಹನೀಯರನ್ನು ಒಂದು ಜಾತಿ ಅಥವಾ ಧರ್ಮಕ್ಕೆ ಮೀಸಲಾಗಿಸದೇ ಸರ್ವರ ಸಾಂಸ್ಕೃತಿಕ ಹಾಗೂ ಧಾರ್ಮಿಕ ರಾಯಭಾರಿಗಳಾಗಿ ಸ್ವೀಕರಿಸಿದಾಗ ಮಾತ್ರವೇ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ..