POWER SAMACHARA | KANNADA NEWS | BREKING NEWS| 11-09-2023..
ದಾವಣಗೆರೆ : ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿದ್ದು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ನಾಯಕರ ವಿರುದ್ದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ, ಈ ಹಿನ್ನಲೆ ರೇಣುಕಾಚಾರ್ಯ ವಿರುದ್ದ ಕೆಂಡಕಾರಿರುವ ದಾವಣಗೆರೆ ಜಿಲ್ಲಾ ಬಿಜೆಪಿ ಸುದ್ದಿಗೋಷ್ಠಿ ನಡೆಸಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರನ್ನ ಉಚ್ಚಾಟನೆ ಮಾಡುವಂತೆ ರಾಜ್ಯದ ನಾಯಕರಿಗೆ ಜಿಲ್ಲಾ ಬಿಜೆಪಿ ದೂರು ನೀಡಿದೆ ಎನ್ನಲಾಗ್ತಿದೆ..
ಎಂಪಿ ರೇಣುಕಾಚಾರ್ಯ ಬಿಜೆಪಿಗೆ ಕಪ್ಪು ಚುಕ್ಕೆ
ಎಂಪಿ ರೇಣುಕಾಚಾರ್ಯ ಬಿಜೆಪಿಗೆ ಕಪ್ಪು ಚುಕ್ಕೆಯಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಗರಂ ಆಗಿದ್ದಾರೆ, ರೇಣುಕಾಚಾರ್ಯ ವಿರುದ್ಧ ರಾಜ್ಯ ಶಿಸ್ತು ಸಮಿತಿಗೆ ವರದಿ ಕಳಿಸುತ್ತೇವೆ, ಅವರು ಏನು ನಿರ್ಧಾರ ಕೈಗೊಳ್ಳುತ್ತಾರೆ ನೋಡೋಣ, ಪಕ್ಷದ ವಿರುದ್ಧದ ನಿಮ್ಮ ನಡವಳಿಕೆ ಸಹಿಸುವುದಿಲ್ಲ, ಬಿಜೆಪಿಯಲ್ಲಿ ಯಾರು ಸುಪ್ರೀಂ ಅಲ್ಲ ಪದೇ ಪದೇ ಮಾತನಾಡಿ ಗೊಂದಲ ಸೃಷ್ಟಿ ಮಾಡಬೇಡಿ, ನಿಮ್ಮ ಗೊಂದಲದಲ್ಲಿ ಯಡಿಯೂರಪ್ಪನ್ನ ಯಾಕೆ ಎಳೆಯುತ್ತೀರಿ, ನಿಮ್ಮಿಂದ ಜಿಲ್ಲೆಯ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ, ರೇಣುಕಾಚಾರ್ಯ ಹೇಳಿಕೆಯಿಂದ ಕಲಿಯಬೇಕಾಗಿದ್ದು ಏನಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಎಸ್ ವೈ ಕಣ್ಣಲ್ಲಿ ನೀರು ತರಿಸಿದ್ದೆ ರೇಣುಕಾಚಾರ್ಯ..
ಈ ಹಿಂದೆ ಯಡಿಯೂರಪ್ಪ ಕಣ್ಣಲ್ಲಿ ಮೊದಲು ನೀರು ಹಾಕಿಸಿದ್ದೇ ಇದೇ ರೇಣುಕಾಚಾರ್ಯ, ಬಿಎಸ್ ವೈ ಮಕ್ಕಳ ಬಂಡವಾಳ ಬಯಲು ಮಾಡುವುದಾಗಿ ಬೆದರಿಕೆ ಹಾಕಿದ್ದರು, ಗೋವಾ, ಹೈದ್ರಾಬಾದ್, ಚೈನ್ನೈ ರೆಸಾರ್ಟ್ ಗಳಲ್ಲಿ ಏನೇನು ಮಾಡಿದ್ದೀರಿ ಗೊತ್ತಿದೆ, ಇಷ್ಟು ದಿನ ಸಹಿಸಿಕೊಂಡಿದ್ದೇವೆ, ಇನ್ನು ಸಹಿಸಲ್ಲ, ನೋಟಿಸ್ ಉತ್ತರ ಕೊಡಲ್ಲ ಅಂತೀರಿ, ನಿಮ್ಮಲ್ಲಿ ಶಿಸ್ತು ಎಲ್ಲಿದೆ? ಸಂಸದ ಜಿ ಎಂ ಸಿದ್ದೇಶ್ವರ್ ನ್ನ ಟಾರ್ಗೆಟ್ ಮಾಡುತ್ತಿದ್ದಾರೆ, ಟಿಕೆಟ್ ಸಿಗದಿದ್ದರೆ ಬೇರೆಯವರನ್ನ ಗೆಲ್ಲಿಸುತ್ತೇವೆ ಎಂದು ಸಿದ್ದೇಶ್ವರ್ ಹೇಳಿದ್ದಾರೆ, ನೀವು ಮುಂದೆ ಯೋಚನೆ ಮಾಡುತ್ತೇನೆ ಎಂದು ಹೇಳುತ್ತೀರಿ, ಇದೇನಾ ನಿಮ್ಮ ಶಿಸ್ತು ಎಂದು ತರಾಟೆಗೆ ತೆಗೆದುಕೊಂಡರು. ನಮಗು ಸಹ ಕಾಂಗ್ರೆಸ್ ಮುಖಂಡರು ಸಂಬಂಧಿಕರಿದ್ದಾರೆ, ನಾವು ಹೊನ್ನಾಳಿಗೆ ಬಂದು ಕಾಂಗ್ರೆಸ್ ನವರನ್ನು ಭೇಟಿ ಮಾಡಿದರೆ ಸುಮ್ಮನಿರ್ತೀರಾ?, ಬೇಕಂತಲೇ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಗೊಂದಲ ಉಂಟು ಮಾಡುತ್ತಿದ್ದೀರಿ, ಹೊನ್ನಾಳಿಯಲ್ಲಿ ನಿಮ್ಮ ತಾಳಕ್ಕೆ ಕುಣಿಯದವರನ್ನ ಪಕ್ಷದಿಂದ ಹೊರ ಹಾಕಿದ್ದೀರಿ ಗೊಂದಲ ಮಾಡಿ ಪ್ರಚಾರ ಪಡೆಯುವುದೇ ರೇಣುಕಾಚಾರ್ಯ ಕೆಲಸವಾಗಿದೆ, ಜಿಲ್ಲೆಯವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತೀರಿ, ಎಸ್ ಎ ರವೀಂದ್ರನಾಥಗೆ ಸಚಿವ ಸ್ಥಾನ ಬಿಟ್ಟು ಕೊಡಬಹುದಿತ್ತು, ಈಗ ಯಾಕೆ ಅವರ ಮೇಲೆ ಅನುಕಂಪ ತೋರಿಸುತ್ತಿದ್ದೀರಿ, ಮಾಡಾಳು ವಿರುಪಾಕ್ಷಪ್ಪನ್ನ ಭೇಟಿಯಾಗುತ್ತೇನೆ ಎಂದು ಹೇಳುತ್ತೀರಿ ನಿತ್ಯವೂ ಭೇಟಿಯಾಗಿ ಯಾರ ಬೇಡ ಅಂದ್ರು ಎಂದು ರೇಣುಕಾಚಾರ್ಯ ನಡೆಯನ್ನ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ ಖಂಡಿಸಿದ್ದಾರೆ..
ಮಾಡಾಳ್ ವಿರುಪಾಕ್ಷಪ್ಪರನ್ನ ಭೇಟಿ ಮಾಡಿದ ರೇಣುಕಾಚಾರ್ಯ
ರಾಜ್ಯದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ, ಸೋತ ಬಳಿಕ ಇನ್ನೂ ಟ್ರ್ಯಾಕ್ ಗೆ ಮರಳಿ ಬರಲು ಸಾಧ್ಯವಾಗುತ್ತಿಲ್ಲ, ಈ ನಡುವೆ ಆಪರೇಷನ್ ಹಸ್ತ ಪಕ್ಷದಲ್ಲಿ ಅಲ್ಲೋಕ ಕಲ್ಲೋಲ ಸೃಷ್ಠಿ ಮಾಡಿದರೆ, ಇತ್ತ ಪಕ್ಷದಲ್ಲಿ ಒಳ ಜಗಳ ಮಿತಿ ಮೀರಿದೆ, ರೇಣುಕಾಚಾರ್ಯ ರೆಬೆಲ್ ಆಗಿ ಸ್ವ ಪಕ್ಷದವರ ವಿರುದ್ದ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ, ಜೊತೆಗೆ ಹಿರಿಯ ನಾಯಕರನ್ನೂ ಭೇಟಿ ಯಾಗುತ್ತಿದ್ದು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೂ ಮುಂದಾಗಿ ಸಂಚಲನ ಮೂಡಿಸಿದ್ದು, ಇತ್ತ ರೇಣುಕಾಚಾರ್ಯರನ್ನ ಉಚ್ಚಾಟನೆ ಮಾಡುವಂತೆ ಜಿಲ್ಲಾ ಬಿಜೆಪಿ ದೂರು ನೀಡಲು ಮುಂದಾಗಿದೆ..
ಹೌದು.. ಕರ್ನಾಟಕ ವಿಧಾನ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿತ್ತು, ಬಳಿಕ ಪಕ್ಷದಲ್ಲಿ ಆಂತರಿಕ ಕಿತ್ತಾಟ ನಡೆದು ಬಿಜೆಪಿ ಕೊತ ಕೊತ ಅಂತಿದೆ, ಎಂಪಿ ಟೆಕೆಟ್ ಆಕಾಂಕ್ಷಿಯಾಗಿರುವ ಎಂಪಿ ರೇಣುಕಾಚಾರ್ಯ, ಶತ್ರುವಿನ ಶತ್ರು ಮಿತ್ರ ಅನ್ನೊ ಮಾತಂತೆ ಸದ್ದಿಲ್ಲದೆ ಸಂಸದರ ವಿರುದ್ದ ಅಸಮಧಾನಗೊಂಡವರನ್ನ ಭೇಟಿಯಾಗುತ್ತಿದ್ದಾರೆ, ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಜಿ ಶಾಸಕ ಗುರುಸಿದ್ದನಗೌಡರನ್ನ ಭೇಟಿಯಾಗಿ ಪರೋಕ್ಷವಾಗಿ ಸಂಸದ ಜಿಎಂ ಸಿದ್ದೇಶ್ವರ್ ವಿರುದ್ದ ಬಂಡಾಯ ಸಾರಿದ್ರು, ಇಂದು ಚನ್ನಗಿರಿಯ ಮಾಡಾಳ್ ಗ್ರಾಮದಲ್ಲಿ ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪರನ್ನ ಭೇಟಿಯಾಗಿ ತೆರೆ ಮರೆ ಕಸರತ್ತು ಆರಂಭಿಸಿದ್ದಾರೆ, ಈ ನಡುವೆ ದಾವಣಗೆರೆ ಬಿಜೆಪಿ ಒಡೆದ ಮನೆಯಂತಾಗಿದೆ, ಈ ಸೋಲಿಗೆ ಬಿಎಸ್ ವೈ ಕಡೆಗಣಿಸಿದ್ದೆ ಕಾರಣ ಅಂತಾ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡರು ಹಾಗೂ ಅವರ ಕುಟುಂಬವನ್ನು ಬಿಜೆಪಿಯಿಂದ ಉಚ್ಚಾಟಿಸಿದ ಹಿನ್ನಲೆ ದಾವಣಗೆರೆ ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಗುರುಸಿದ್ದನಗೌಡರ ಮನೆಗೆ ಭೇಟಿ ನೀಡಿ ಕೆಲವೊತ್ತು ಮಾತುಕತೆ ನಡೆಸಿದರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗಳೂರಿನಲ್ಲಿ ಬಿಜೆಪಿಗೆ ಬೆಂಬಲಿಸುವ ಬದಲು ಬೇರೆ ವ್ಯಕ್ತಿಗೆ ಬೆಂಬಲಿಸಿದ್ದರು ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್ ವಿ ರಾಮಚಂದ್ರಪ್ಪ ಪಕ್ಷದ ಜಿಲ್ಲಾಧ್ಯಕ್ಷರಿಗೆ ದೂರು ನೀಡಿದ್ದರು, ಈ ಹಿನ್ನಲೆ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಗುರುಸಿದ್ದನಗೌಡ ಅವರನ್ನು ಉಚ್ಚಾಟಿಸಿದ್ದರು, ಹೀಗಾಗಿ ಇಂದು ಗುರುಸಿದ್ದನಗೌಡ ಮನೆಗೆ ಭೇಟಿ ನೀಡಿದ ರೇಣುಕಾಚಾರ್ಯ, ಜಿಲ್ಲಾಧ್ಯಕ್ಷನ ಏಕಪಕ್ಷೀಯ ನಿರ್ಧಾರಕ್ಕೆ ಕೆಂಡಕಾರಿದರು, ಇಂತವರಿಂದಲೇ ಪಕ್ಷ ಹಾಳಾಗುತ್ತಿದೆ, ಯಾವುದೇ ನೋಟೀಸ್ ನೀಡದೇ ಉಚ್ಚಾಟನೆ ಮಾಡಿದ್ದು ಖಂಡನೀಯ, ಚುನಾವಣೆಯ ಸಂದರ್ಭದಲ್ಲಿ ಓಡಾಡಿ ಪಕ್ಷ ಕಟ್ಟಿದವರು ಗುರುಸಿದ್ದನಗೌಡ್ರು. ಚುನಾವಣೆಯಲ್ಲಿ ಅಭ್ಯರ್ಥಿ ವಿರುದ್ದ ಕೆಲಸ ಮಾಡಿದರೆ ನೋಟೀಸ್ ನೀಡಬೇಕು. ಆದರೆ ಯಾವುದೇ ನೋಟೀಸ್ ನೀಡದೆ ಪಕ್ಷದಿಂದ ಗುರುಸಿದ್ದನಗೌಡ್ರನ್ನು ಕುಟುಂಬಸ್ಥರನ್ನು ಉಚ್ಚಾಟನೆ ಮಾಡಿದ್ದಾರೆ, ಡಾ.ರವಿಕುಮಾರ್ ಕೂಡ ಲೋಕಾಸಭಾ ಚುನಾವಣೆ ಟಿಕೇಟ್ ಆಕಾಂಕ್ಷಿ, ಅವರು ಬೆಳೆಯಬಾರದು ಎಂದು ಉಚ್ಚಾಟನೆ ಮಾಡಿದ್ದು ಖಂಡನೀಯ, ಮಾಜಿ ಸಚಿವ ರವೀಂದ್ರನಾಥ್, ಮಾಜಿ ಶಾಸಕ ಗುರುಸಿದ್ದನಗೌಡ್ರು ಅಂತವರನ್ನು ಮೂಲೆಗುಂಪು ಮಾಡುತ್ತಾರೆ. ಜಿಲ್ಲೆಯ ಐದು ಶಾಸಕರು ಒಟ್ಟಾಗಿ ಸಚಿವ ಸ್ಥಾನ ಕೇಳಿದರೂ ಕೊಡಲು ಬಿಡಲಿಲ್ಲ. ಸಚಿವ ಸ್ಥಾನ ತಪ್ಪಿಸಿದರು ಎಂದು ಆರೋಪಿಸಿದ್ದರು..
ಜಿಲ್ಲಾಧ್ಯಕ್ಷನಿಂದ ಏಕಪಕ್ಷೀಯ ನಿರ್ಣಯ..
ಇತ್ತ ಏಕಪಕ್ಷೀಯವಾಗಿ ಜಿಲ್ಲಾ ಅಧ್ಯಕ್ಷರು ನಿರ್ಧಾರ ಕೈಗೊಂಡಿದ್ದಾರೆ ಎಂದು ಜಿಲ್ಲಾಧ್ಯಕ್ಷರ ನಡೆಯನ್ನು ಖಂಡಿಸಿದರು. ಮಹಾನ್ ನಾಯಕ ಯಡಿಯೂರಪ್ಪರನ್ನೂ ವ್ಯವಸ್ಥಿತವಾಗಿ ತುಳಿದರು, ಗ್ರಾ.ಪಂ ಗೆಲ್ಲೋಕೊ ಹಾಕದವರಿಗೆ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು ಎಂದು ಪರೋಕ್ಷವಾಗಿ ನಳೀನ್ ಕುಮಾರ್ ಕಟೀಲ್, ಬಿಎಲ್ ಸಂತೋಷ್ ಅವರಿಗೆ ವಾಗ್ದಾಳಿ ನಡೆಸಿದ್ದರು, ನಮ್ಮವರೇ ಆರೋಪ ಹೊರಿಸಿ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರು ಎಂದು ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು..
ಮಾಜಿ ಶಾಸಕ ಗುರುಸಿದ್ದನಗೌಡ ಗರಂ..
ಇನ್ನೂ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮಾಜಿ ಶಾಸಕ ಗುರುಸಿದ್ದನಗೌಡ ಮಾತನಾಡಿ, ಸಂಸದ ಜಿಎಂ ಸಿದ್ದೇಶ್ವರ್ ಅವರು ಇದಕ್ಕೆಲ್ಲ ಕಾರಣ, ಚಿತ್ರದುರ್ಗದಲ್ಲಿದ್ದ ಇವರ ಅಪ್ಪ ಮಲ್ಲಿಕಾರ್ಜುನಪ್ಪ ಅವರನ್ನ ದಾವಣಗೆರೆಗೆ ಕರೆ ತಂದಿದ್ದೆ ನಾನು, ಜಿಎಂ ಸಿದ್ದೇಶ್ವರ್ ಕಾಂಗ್ರೆಸ್ ನಲ್ಲಿ ಇದ್ದರು, ಸಿದ್ದೇಶ್ವರ್ ಅವರ ಅಪ್ಪನಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಮನುಷ್ಯ, ನಮ್ಮ ಅಪ್ಪ ಗೆದ್ದ ಮೇಲೆ ಬಿಜೆಪಿಗೆ ಬರುತ್ತೇನೆ ಎಂದು ಹೇಳುತ್ತಿದ್ದ, ಈಗ ಬಿಜೆಪಿ ಕಾರ್ಯಕರ್ತರನ್ನ ಉದಾಸೀನ ಮಾಡುತ್ತಾನೆ, ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇವೆ, ನನ್ನ ಮಗ ಎಂಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರಿಗೆ ಟಿಕೆಟ್ ಕೈ ತಪ್ಪುವ ಭೀತಿಯಿಂದ ಈ ರೀತಿ ಷ್ಯಡ್ಯಂತ್ರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಟ್ಟಾರೆ ಗಾಯದ ಮೇಲೆ ಬರೆ ಎಳೆದಂತೆ ಬಿಜೆಪಿಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಿವೆ, ಇದರಿಂದ ಬಿಜೆಪಿ ಪಕ್ಷದಲ್ಲಿ ಎಲ್ಲವು ಸರಿ ಇಲ್ಲ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ, ಬಿಜೆಪಿಗೆ ಬಿಸಿ ತುಪ್ಪ ಆಗಿರುವ ಎಂಪಿ ರೇಣುಕಾಚಾರ್ಯರ ಮೇಲೆ ಪಕ್ಷ ಕ್ರಮ ಆಗುತ್ತಾ, ಬಿಜೆಪಿ ನಾಯಕರ ಆರೋಪ ಪ್ರತ್ಯಾರೋಪಗಳು ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕಿದೆ..