POWER SAMACHARA | KANNADA NEWS | BIG NEWS FOR KURUBA’S|22-05-2023
ದಾವಣಗೆರೆ: ಕುರುಬ ಜನಾಂಗಕ್ಕೆ ಎಸ್ ಟಿ ಮೀಸಲಾತಿ ನೀಡುವ ವಿಚಾರ ಗೊಂದಲಕ್ಕೆ ತೆರೆ ಬಿದ್ದಿದ್ದು, ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆ(24-3-2023) ನಿರ್ಣಯದಂತೆ ಕರ್ನಾಟಕ ಸರ್ಕಾರವು 28-03-2023ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ..
ಅವಿರತ ಹೋರಾಟದ ಫಲ: ಗಟ್ಟಿಯಾಗಿ ನಿಂತು ಮೊದಲ ಗೆಲುವು ಪಡೆದ ಕಾಗಿನೆಲೆ ಶ್ರೀ..
ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮಿಜಿಯವರು ಹಾವೇರಿಯ ಶ್ರೀ ಕಾಗಿನೆಲೆ ಪೀಠದಿಂದ ಬೆಂಗಳೂರುವರೆಗೆ ಸುಮಾರು 360 ಕಿಲೋ ಪಾದಯಾತ್ರೆ ನಡೆಸಿದ್ದರು, ಈ ಹಿನ್ನಲೆ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಸಂಪುಟ ಸಭೆಯಲ್ಲಿ ಚರ್ಚಿಸಿ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಿದ್ದರು, ಆದರೆ ಅದು ಸ್ಪಷ್ಟತೆಗೆ ಬಂದಿರಲಿಲ್ಲ, ಸದ್ಯ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದೆ..
ಭಾರತ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಯಾವುದೇ ಸಮುದಾಯವನ್ನು ಪರಿಶಿಷ್ಟ ಪಂಗಡವೆಂದು ಪರಿಗಣಿಸಲು ಕೈಗೊಳ್ಳುವ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಲೋಕ್ಯೂರ್ ಸಮಿತಿಯ ಮಾನದಂಡಗಳನ್ನು ಅನುಸರಿಸುತ್ತದೆ, ಅದರಂತೆ ಸದರಿ ಕುರುಬ ಸಮುದಾಯದ ಕುಲಶಾಸ್ರ್ತೀಯ ಅಧ್ಯಯನ ವರದಿಯಲ್ಲಿ ಸಮಿತಿಯ ಮಾನದಂಡಗಳು ಇರುವುದನ್ನು ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಸದರಿ ವರದಿಯನ್ನು ಭಾರತ ಸರ್ಕಾರಕ್ಕೆ ಸಲ್ಲಿಸಲು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣ್ಣಿವಣ್ಣನ್ ಆದೇಶ ಮಾಡಿದ್ದಾರೆ..
ಕಾಗಿನೆಲೆ ಶ್ರೀ ಧನ್ಯವಾದ ಪತ್ರ..
ಆತ್ಮೀಯ ಸಮಾಜದ ಬಂಧುಗಳ ಗಮನಕ್ಕೆ.. ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನೇತೃತ್ವದಲ್ಲಿ ಅಖಂಡ ಕರ್ನಾಟಕದ ಕುರುಬರ ಎಸ್.ಟಿ ಹೋರಾಟ ಸಮಿತಿ ರಚನೆ ಮಾಡಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಕುರುಬರ ಜಾಗೃತಿ ಸಭೆ-ಸಮಾವೇಶಗಳನ್ನು ಮಾಡುವುದರ ಮೂಲಕ 2021 ಜನವರಿ 15ರಂದು ಶ್ರೀಕ್ಷೇತ್ರ ಕಾಗಿನೆಲೆಯಿಂದ ರಾಜಧಾನಿ ಬೆಂಗಳೂರುವರೆಗೆ 360 ಕಿ. ಮೀ. ಪಾದಯಾತ್ರೆಯನ್ನು ಸಮುದಾಯದ ಬಂಧುಗಳ ತನು – ಮನ – ಧನ ಸಹಯೋಗದೊಂದಿಗೆ ಯಶಸ್ವಿಗೊಳಿಸಿ, 2021 ಫೆಬ್ರವರಿ 7 ರಂದು ಎಸ್. ಟಿ. ಹೋರಾಟ ಪಾದಯಾತ್ರೆಯ ಸಮಾರೋಪವನ್ನು ಲಕ್ಷೋಪ ಲಕ್ಷ ಬಂಧುಗಳ ಸಾಕ್ಷಿಯಾಗಿ ಕರ್ನಾಟಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಸದರಿ ಮನವಿಯನ್ನು ರಾಜ್ಯ ಸರ್ಕಾರ ಪ್ರತಿನಿಧಿಗಳನ್ನು ಖುದ್ದಾಗಿ ಕಳುಹಿಸಿ ಸ್ವೀಕರಿಸಿತು. ತದನಂತರ ಶ್ರೀಕನಕ ಗುರುಪೀಠದ ಶ್ರೀಗಳು, ಉತ್ತರ ಕರ್ನಾಟಕದ ಹಲವು ಮಠಾಧೀಶರ ಮತ್ತು ಕುರುಬರ ಎಸ್.ಟಿ. ಹೋರಾಟ ಸಮಿತಿ, ಹಾಲುಮತ ಮಹಾಸಭಾ, ರಾಜ್ಯದ ವಿವಿಧ ಸಂಘಟನೆಗಳ ನಿರಂತರ ಅವಿರತ ಪ್ರಯತ್ನಗಳಿಂದ ಕುರುಬರ ಎಸ್.ಟಿ. ಮೀಸಲಾತಿಯ ಕುಲಶಾಸ್ತ್ರಿಯ ಅಧ್ಯಯನ ವರದಿಯನ್ನು ಕರ್ನಾಟಕ ಸರ್ಕಾರವು ದಿನಾಂಕ 24-03-2023 ರಂದು ಸಚಿವ ಸಂಪುಟದಲ್ಲಿ ಅಂಗೀಕರಿಸಿ ಅನುಮೋದನೆ ನೀಡಿತು. ಸದರಿ ವರದಿಯನ್ನು ದಿನಾಂಕ 28-03-2023 ರಂದು ಕರ್ನಾಟಕ ಸರ್ಕಾರವು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಆದೇಶಿಸಿದೆ ನಮ್ಮಗಳ ಬೆಂಬಿಡದ ಹೋರಾಟದ ಫಲವಾಗಿ ಇಂದು ನಿರೀಕ್ಷೆಯಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಆಗಿದ್ದು ಮುಂದೆ ಕೇಂದ್ರದಲ್ಲಿ ಅನುಮೋದನೆ ಪಡೆಯಲು ಸಮುದಾಯವು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಕುರುಬ ಸಮುದಾಯವು ಎಸ್. ಟಿ. ಮೀಸಲಾತಿಯನ್ನು ಪಡೆಯಬಹುದು ಎಂದು ಸಮುದಾಯದ ಬಂಧುಗಳಿಗೆ ತಿಳಿಸಲು ಶ್ರೀಮಠವು ಹರ್ಷಿಸುತ್ತದೆ . ಈ ಸಮುದಾಯದ ಸತ್ಕಾರ್ಯಕ್ಕಾಗಿ ಸಹಕರಿಸಿದ ಕರ್ನಾಟಕ ಸರ್ಕಾರಕ್ಕೂ ಮತ್ತು ಸಮುದಾಯದ ಎಲ್ಲರಿಗೂ ಶ್ರೀಮಠವು ಅಭಿನಂದಿಸಿ ಆಶೀರ್ವದಿಸುತ್ತದೆ.
ದಿನಾಂಕ : 22-05-2023
ಭಗವತ್ಸೇವೆಯಲ್ಲಿ..
ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿಂಹಾಸನಾಧೀಶ್ವರ
-ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮಿಗಳು, ಶ್ರೀ ಕ್ಷೇತ್ರ ಕಾಗಿನೆಲೆ..