POWER SAMACHARA | KANNADA NEWS | BREKING NEWS| 26-09-2023..
ದಾವಣಗೆರೆ; ಭದ್ರಾ ಡ್ಯಾಂನಿಂದ ಬಲದಂಡೆಗೆ ನಿರಂತರವಾಗಿ ನೂರು ದಿನ ನೀರು ಹರಿಸುವಂತೆ ಆಗ್ರಹಿಸಿ ರೈತರು ದಾವಣಗೆರೆ ಬಂದ್ ಮಾಡಿದ್ದರು ಸಹ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದು, ಆನ್ ಅಂಡ್ ಆಫ್ ಆದೇಶದಂತೆಯೇ ಇಂದು ನೀರು ಬಿಡುಗಡೆಗೆ ಆದೇಶ ಮಾಡಿ ಮತ್ತೆ ರೈತರ ಕೆಂಗಣ್ಣಿಗೆ ಗುರಿಯಾಗಿದೆ..
ಸೆಪ್ಟೆಂಬರ್ 16ರಿಂದ 25ರವರೆಗೆ ಹತ್ತು ದಿನಗಳ ಕಾಲ ನೀರು ಬಂದ್ ಗೆ ಆದೇಶ ಮಾಡಲಾಗಿತ್ತು, ಹತ್ತು ದಿನ ಮುಗಿದ ಹಿನ್ನಲೆ ಇಂದು ನಾಲೆಗೆ ನೀರು ಬಿಡಲಾಗುತ್ತಿದೆ, ಅಕ್ಟೋಬರ್ 16ರಿಂದ 25ರವರೆಗೆ ಹತ್ತು ದಿನಗಳ ಕಾಲ ಮತ್ತೆ ಬಂದ್ ಮಾಡಲು ಆದೇಶ ಮಾಡಲಾಗಿದೆ, ನಿರಂತರ ನೀರು ಹರಿಸುವಂತೆ ರೈತರು ಹೋರಾಟ ಮಾಡಿದ್ದರು ಸಹ ತಲೆಕೆಡಿಸಿಕೊಳ್ಳದ ಕಾಡಾ ಸಮಿತಿ ಹಾಗೂ ರಾಜ್ಯ ಸರ್ಕಾರ ಆನ್ ಅಂಡ್ ಆಫ್ ಆದೇಶದಂತೆಯೇ ಮುಂದುವರೆದಿದೆ..
ಇಂದಿನಿಂದ 20 ದಿನ ದಿನ ಮಾತ್ರ ಹರಿಯಲಿದೆ ನೀರು..
2023-24 ನೇ ಸಾಲಿನಲ್ಲಿ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಸರದಿಯನ್ವಯ ಹರಿಸಲಾಗುವುದು ಎಂದು ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ತಿಳಿಸಿದ್ದಾರೆ. ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15 ರವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26 ರಿಂದ ನವೆಂಬರ್ 17 ರವರೆಗೆ ಒಟ್ಟು 23 ದಿನಗಳು ನೀರನ್ನು ಹರಿಸಲಾಗುವುದು.
ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದ್ದು, ಅಕ್ಟೋಬರ್ 1 ರವರೆಗೆ ಒಟ್ಟು 15 ದಿನಗಳು ನೀರನ್ನು ಹರಿಸಲಾಗುತ್ತದೆ. ನಂತರ ಅಕ್ಟೋಬರ್ 12 ರಿಂದ 26 ರವರೆಗೆ ಒಟ್ಟು 15 ದಿನಗಳು ಹಾಗೂ ನವೆಂಬರ್ 6 ರಿಂದ 17 ರವರೆಗೆ ಒಟ್ಟು 12 ದಿನಗಳು ನೀರನ್ನು ಹರಿಸಲಾಗುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ನಿರ್ಲಕ್ಷ್ಯ, ರೈತರ ಪರ ನಿಲ್ಲದ ಜಿಲ್ಲಾ ಉಸ್ತುವಾರಿ ಸಚಿವ..
ರಾಜ್ಯದಲ್ಲಿ ಸರ್ಕಾರ ರೈತರ ವಿಚಾರದಲ್ಲಿ ಏಕೋ ನಿರ್ಲಕ್ಷ್ಯ ಧೋರಣೆ ತಾಳುತ್ತಾ ಇದೆ, ಒಂದು ಕಡೆ ತಮಿಳು ನಾಡಿಗೆ ನೀರು ಬಿಟ್ಟು ಛೀಮಾರಿ ಹಾಕಿಸಿಕೊಂಡ ಸರ್ಕಾರ, ಇನ್ನೊಂದೆಡೆ ರೈತರಿಗೆ ನೀರು ಕೊಡುತ್ತೇವೆ ಎಂದು ಹೇಳಿ ಉಲ್ಟಾ ಹೊಡೆದು ಚೆಲ್ಲಾಟ ಆಡುತ್ತಿದೆ, ಈ ಹಿನ್ನಲೆ ರೊಚ್ಚಿಗೆದ್ದ ಅನ್ನದಾತರು ಸೋಮವಾರ ದಾವಣಗೆರೆ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು.. ಭದ್ರಾ ಜಲಾಶಯ ದಾವಣಗೆರೆ ಜಿಲ್ಲೆಯ ಅನ್ನದ ಬಟ್ಟಲು ಅಂತಲೇ ಹೆಸರು, ಡ್ಯಾಂ ನಂಬಿ, ಲಕ್ಷಾಂತರ ರೈತರು ಬದುಕುತ್ತಿದ್ದಾರೆ, ಈ ಹಿನ್ನಲೆ ಆಗಸ್ಟ್ 10 ರಿಂದ ನಿರಂತರ ನೂರು ದಿನ ಬಲದಂಡೆ ನಾಲೆಗೆ ನೀರು ಬಿಡುವುದಾಗಿ ಶಿವಮೊಗ್ಗದಲ್ಲಿರುವ ಕಾಡಾ ಸಮಿತಿ ಹಾಗೂ ರಾಜ್ಯ ಸರ್ಕಾರ ಆದೇಶ ಮಾಡಿತ್ತು, ಡ್ಯಾಂ ಪೂರ್ತಿ ಭರ್ತಿ ಆಗದ ಹಿನ್ನಲೆ ಬೇಸಿಗೆ ಬೆಳೆಗೆ ನೀರು ಸಿಗೋದಿಲ್ಲ, ಈ ಭಾರೀಯಾದರು ಭತ್ತ ಬೆಳೆಯೋಣ ಎಂದು ರೈತರು ಭತ್ತ ನಾಟಿ ಮಾಡಿದ್ದರು, ಭತ್ತ ನಾಟಿ ಮಾಡಿ ಈಗಾಗಲೇ ತಿಂಗಳುಗಳೇ ಕಳೆದಿವೆ, ಆದರೆ ಈಗ ರೈತರಿಗೆ ಜಲಸಂಪನ್ಮೂಲ ಇಲಾಖೆ ಶಾಕ್ ನೀಡಿದೆ, ನೂರು ದಿನ ನಿರಂತರ ನೀರು ಅಂತಾ ಆದೇಶ ಮಾಡಿ ಈಗ ಎರಡು ಹಂತಗಳಲ್ಲಿ ನೀರು ನಿಲ್ಲಿಸುವುದಾಗಿ ಆದೇಶ ಮಾಡಿ ರೈತರಿಗೆ ಸಂಕಷ್ಟ ತಂದೊಡ್ಡಿದೆ, ಡ್ಯಾಂನಲ್ಲಿ 160 ಅಡಿ ಇದ್ದರು ಸಹ ಕಾಡಾ ಸಮಿತಿ ರೈತರನ್ನು ಕಾಡುತ್ತಲೇ ಬರುತ್ತಿದೆ, ಈಗಾಗಲೇ ಒಂದುವರೆ ತಿಂಗಳು ನೀರು ಹರಿಸಲಾಗಿದೆ, ಇನ್ನೆರಡು ತಿಂಗಳು ನೀರು ಹರಿದರೆ ಬೆಳೆ ಕೈಗೆ ಸಿಗುತ್ತದೆ ಅಂತಾ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಭಾರತೀಯ ರೈತ ಒಕ್ಕೂಟ ದಾವಣಗೆರೆ ಬಂದ್ ಮಾಡಿ ಯಶಸ್ವಿಯಾಗಿತ್ತು. ಆದರೆ ನೀರು ಬಂದ್ ಗೆ ಮತ್ತೆ ಆದೇಶ ಮಾಡಲಾಗಿದೆ. ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು, ಯಾವುದೇ ಕಾರಣಕ್ಕೂ ನೀರು ನಿಲ್ಲಿಸಲ್ಲ ಎಂದು ರೈತರಿಗೆ ಭರವಸೆ ನೀಡಿದ್ದರು, ಆದರೆ ಆನ್ ಅಂಡ್ ಆಫ್ ಮಾದರಿಯಲ್ಲಿ ನೀರು ಬಿಡುಗಡೆಗೆ ಆದೇಶ ಮಾಡಿದ ಹಿನ್ನಲೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಮೇಲೆ ರೈತರು ಕೆಂಡಕಾರಿದ್ದಾರೆ. ಸಚಿವರು ರೈತರು ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಆನ್ ಅಂಡ್ ಆಫ್ ನಲ್ಲೇ ನೀರು ಬಿಡುಗಡೆ..
ಮೊದಲು ಆಗಸ್ಟ್ 10ರಿಂದ ನಿರಂತರ ನೂರು ದಿನ ಹರಿಸಲು ಆದೇಶ ಮಾಡಿದ್ದ ಭದ್ರಾ ಯೋಜನಾ ಸಲಹಾ ಸಮಿತಿ, ಡ್ಯಾಂ ಪೂರ್ಣ ಭರ್ತಿ ಆಗಿಲ್ಲ, ಮುಂದೇ ತೋಟಗಾರಿಕೆ ಬೆಳೆಗಳಿಗೆ ತೊಂದರೆ ಆಗಬಹುದು ಎಂದು ಈಗ ಎರಡನೇ ಆದೇಶ ಮಾಡಿದೆ, ಆದೇಶ ಹಿನ್ನಲೆ ಈಗಾಗಲೇ ನಾಲೆಗೆ ನೀರು ನಿಲ್ಲಿಸಲಾಗಿದೆ ಹಾಗೂ ಅಕ್ಟೋಬರ್ 16ರಿಂದ ಹತ್ತು ದಿನ ನೀರು ನಿಲ್ಲಿಸಲು ಆದೇಶ ಮಾಡಿದೆ, ಬಲದಂಡೆ ಹಾಗೂ ಎಡದಂತೆ ಎರಡೂ ಕಡೇಗಳಲ್ಲೂ ಆನ್ ಅಂಡ್ ಆಫ್ ಮಾದರಿಯಲ್ಲಿ ನೀರು ನಿಲ್ಲಿಸಲು ಆದೇಶ ಮಾಡಿದೆ, ನಿರಂತರ ನೀರು ಹರಿದರೆ ಗದ್ದೆಗಳಿಗೆ ನೀರು ಸಿಗೋದು ಕಷ್ಟ, ಆನ್ ಅಂಡ್ ಆಫ್ ಮಾಡಿದರೆ ನಾಲೆಗಳಿಗೆ ನೀರು ಬರುವುದೇ ಡೌಟು, ಇದರಿಂದ ಎಲ್ಲಾ ಬೆಳೆಗಳು ಒಣಗಿ ಹೋಗುವುದು ನಿಶ್ಚಿತ, ಮೊದಲೇ ನೀರು ಬಿಡುವುದಿಲ್ಲ ಎಂದು ತಿಳಿಸಿದ್ದರೆ ನಾವು ಭತ್ತ ನಾಟಿಯೇ ಮಾಡುತ್ತಿರಲಿಲ್ಲ, ಈಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈಗ ನೀರು ಕೊಡೋದಿಲ್ಲ ಎಂದರೆ ಸಾಲ ಮೈ ಮೇಲೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಒಟ್ಟಾರೆ ರಾಜ್ಯ ಸರ್ಕಾರ ಹಾಗೂ ನೀರಾವರಿ ಸಮಿತಿ ರೈತರ ಬದುಕಲ್ಲಿ ಆಟವಾಡುತ್ತಿದೆ, ಮೊದಲು ನೀರು ಬಿಡುವುದಾಗಿ ಹೇಳಿ ಈಗ ಬಂದ್ ಮಾಡಲು ನಿರ್ಧಾರ ಮಾಡಿ ರೈತರಿಗೆ ಸಂಕಷ್ಟ ತಂದೊಡ್ಡಿದೆ. ದಾವಣಗೆರೆ ಬಂದ್ ಹಾಗೂ ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು ಸಹ ರಾಜ್ಯ ಸರ್ಕಾರವಾಗಲಿ, ಕಾಡಾ ಸಮಿತಿಯಲ್ಲಿ ಕ್ಯಾರೇ ಎನ್ನದೇ ಇರುವುದು ದುರಾದೃಷ್ಟಕರ..