POWER SAMACHARA | KANNADA NEWS | BREKING NEWS| 27-04-2024
ದಾವಣಗೆರೆ: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್ ಅವರನ್ನ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಹಾಗೂ ಎಂಪಿ ರೇಣುಕಾಚಾರ್ಯ ಟೀಂ, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ದೂರು ನೀಡಿದ್ದು ದಾವಣಗೆರೆ ಬಿಜೆಪಿಯಲ್ಲಿ ಮತ್ತೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ..
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡಬೇಕು ಎಂದು ರೇಣುಕಾಚಾರ್ಯ ಅಂಡ್ ಟೀಮ್ ಪಟ್ಟು ಹಿಡಿದಿತ್ತು, ಈ ಹಿನ್ನಲೆ ನಿನ್ನೆ ದಾವಣಗೆರೆ ಖಾಸಗಿ ರೆಸಾರ್ಟ್ ಒಂದರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿತ್ತು, ಈ ಸಭೆ ಸುಮಾರು ಎರಡು ಗಂಟೆಗಳ ಕಾಲ ನಡೆದು ತಾತ್ಕಾಲಿಕ ಸಂಧಾನ ಯಶಸ್ವಿಯಾಗಿದೆ, ಆದರೆ ಸಭೆಯಲ್ಲಿ ನಡೆದ ಆ ಒಂದು ವಾಗ್ವಾದ ಮತ್ತೆ ತಿರುವು ಪಡೆದಿದೆ, ಸಂಧಾನ ಸಭೆಯಲ್ಲಿ ಬಿಜೆಪಿ ಮುಖಂಡರ ಮಧ್ಯೆಯೇ ವಾಗ್ವಾದ ಉಂಟಾಗಿತ್ತು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆ ಅಜಯ್ ಕುಮಾರ್ ಮತ್ತು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು, ಒಬ್ಬರಿಗೊಬ್ಬರು ವಾಗ್ವಾದ ನಡೆಸಿ ಕೆಟ್ಟ ಪದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ..
ವಿಧಾನಸಭೆ ಚುನಾವಣೆ ವೇಳೆ ಹಣ ಹಂಚಿಕೆ ವಿಚಾರ ಮುಂದಿಟ್ಟು ವಾಗ್ವಾದ…!
ಕಳೆದ ವಿಧಾನಸಭೆ ಚುನಾವಣೆ ವೇಳೆ ಮಾಜಿ ಮೇಯರ್ ಬಿಜಿ ಅಜಯ್ ಕುಮಾರ್ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ನಡೆಸಿದ್ದರು, ಈ ವೇಳೆ ಯಶವಂತರಾವ್ ಜಾದವ್ ಅವರು ಲಕ್ಷ ಲಕ್ಷ ರೂಪಾಯಿ ಹಣ ಪಡೆದಿದ್ದರು ಎಂದು ಅಜಯ್ ಕುಮಾರ್ ನಿನ್ನೆ ನಡೆದ ಸಭೆ ಮುಂದೇ ಪ್ರಸ್ತಾಪ ಮಾಡಿದರು ಎನ್ನಲಾಗಿದೆ, ಹಿರಿಯ ಮುಖಂಡರಿಗೆ ಈ ರೀತಿ ಲಕ್ಷ ಲಕ್ಷ ಹಣ ಕೊಟ್ಟು ಚುನಾವಣೆ ಮಾಡುವುದಾದರು ಹೇಗೆ ಎಂದು ಹೇಳಿದ್ದು, ಈ ವೇಳೆ ಕುಪಿತಗೊಂಡ ಯಶವಂತರಾವ್ ಜಾದವ್, ಏರುಧ್ವನಿಯಲ್ಲಿ ವಾಗ್ವಾದ ಮಾಡಿದ್ದಾರೆ, ಹಣ ಕೊಟ್ಟಿದ್ದು ಸುಳ್ಳು, ಈಗ ಇಂತಹ ವಿಚಾರ ಪ್ರಸ್ತಾಪ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನೂ ಎಂದು ವಾಗ್ವಾದ ಯಶವಂತರಾವ್ ವಾಗ್ವಾದ ನಡೆಸಿದ್ದಾರೆ. ಬಳಿಕ ಅಜಯ್ ಕುಮಾರ್ ಹಾಗೂ ಎಂಪಿ ರೇಣುಕಾಚಾರ್ಯ ಸಹ ಏರುಧ್ವನಿಯಲ್ಲಿ ವಾಗ್ವಾದ ಮಾಡಿದ್ದಾರೆ, ಮಾಜಿ ಸಿಎಂ ಬಿಎಸ್ ವೈ, ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಎದುರಲ್ಲೇ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಪರಿಸ್ಥಿತಿ ವಿರೋಪಕ್ಕೆ ತಿರುಗಿದೆ, ಕೊನೆಯಲ್ಲಿ ಪ್ರಹ್ಲಾದ್ ಜೋಷಿಯವರು ಎಲ್ಲರನ್ನೂ ಸಮಾಧಾನಪಡಿಸಿದ್ದಾರೆ ಎಂದು ತಿಳಿದು ಬಂದಿದೆ..
ಯಶವಂತರಾವ್ ರನ್ನ ಉಚ್ಚಾಟಿಸಿ..
ಸಭೆ ಬಳಿಕ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ಮನೆಯಲ್ಲಿ ಸಭೆ ಸೇರಿದ ಗುಂಪು, ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಇದ್ದ ಸಭೆಯಲ್ಲಿ ಯಶವಂತರಾವ್ ಅಶಿಸ್ತು ವರ್ತನೆ ತೋರಿದ್ದಾರೆ ಈ ಹಿನ್ನಲೆ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಪತ್ರದ ಮುಖೇನ ದೂರು ಸಲ್ಲಿಸಿದ್ದಾರೆ..
ದೂರಿನ ಪ್ರತಿಯಲ್ಲಿ ಏನಿದೆ..!?
ದಿನಾಂಕ 26-03-2024ರಂದು ದಾವಣಗೆರೆಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದು, ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಯಿತು. ಸಭೆಯ ಅಂತ್ಯದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಹಾಲಿ ಸದಸ್ಯರಾದ ಶ್ರೀ ಬಿ.ಜಿ. ಅಜಯ್ ಕುಮಾರ್ ಅವರ ಜೊತೆ ಶ್ರೀ ಯಶವಂತರಾವ್ ಜಾಧವ್ ಅವರು ಅವಾಚ್ಯ ಶಬ್ದಗಳೊಂದಿಗೆ ವಾಗ್ವಾದ ಮಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯರಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು, ಕರ್ನಾಟಕ ಲೋಕಸಭಾ ಪ್ರಭಾರಿ ಸನ್ಮಾನ್ಯ ಶ್ರೀ ರಾಧಮೋಹನ್ ಅಗರ್ ವಾಲ್, ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಷಿ, ಪ್ರಾಂತ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜೇಶ್‌ಜಿ, ದಾವಣಗೆರೆ ಜಿಲ್ಲೆ ಮಾಜಿ ಸಚಿವರುಗಳಾದ ಸನ್ಮಾನ್ಯ ಶ್ರೀ ಎಸ್.ಎ.ರವೀಂದ್ರನಾಥ್, ಸನ್ಮಾನ್ಯ ಶ್ರೀ ಜಿ. ಕರುಣಾಕರ ರೆಡ್ಡಿ, ಸನ್ಮಾನ್ಯ ಶ್ರೀ ಎಂ.ಪಿ.ರೇಣುಕಾಚಾರ್ಯ, ಕ್ಲಸ್ಟರ್ ಪ್ರಮುಖ್ ಶ್ರೀ ಕೆ.ಎಸ್. ನವೀನ್, ಎನ್. ರವಿಕುಮಾರ್ ವಿ.ಪ.ಮುಖ್ಯ ಸಚೇತಕರು, ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ್ ಇವರ ಸಮಕ್ಷಮದಲ್ಲಿಯೇ ಅತ್ಯಂತ ಅನುಚಿತವಾಗಿ ವರ್ತಿಸಿದ ಯಶವಂತರಾವ್ ಜಾಧವ್ ಅವರ ನಡವಳಿಕೆ ಖಂಡನೀಯ. ಬಿಜೆಪಿಯ ಪ್ರಮುಖರ ಸಭೆಯಲ್ಲಿ ತುಂಬಾ ಆಗೌರವಯುತ ವರ್ತನೆ ಮಾಡಿರುತ್ತಾರೆ. ಬಿಜೆಪಿ ಕಾರ್ಯಕರ್ತರ ಗೌರವ ಕಾಪಾಡುವ ಜವಾಬ್ದಾರಿ ತಮ್ಮದಾಗಿದ್ದು ಚುನಾವಣೆಯಲ್ಲಿ ನಾವೆಲ್ಲರೂ ಸಕ್ರಿಯವಾಗಿ ಭಾಗವಹಿಸಲು, ತುರ್ತಾಗಿ ಯಶವಂತರಾವ್ ಜಾಧವ್ ಬಗ್ಗೆ ಶಿಸ್ತು ಕ್ರಮ ಜರುಗಿಸಬೇಕಾಗಿ ವಿನಂತಿಸುತ್ತೇವೆ.
ವಂದನೆಗಳೊಂದಿಗೆ..
ಎಸ್ ಎ ರವೀಂದ್ರನಾಥ್, ಕರುಣಾಕರ ರೆಡ್ಡಿ, ಎಂಪಿ ರೇಣುಕಾಚಾರ್ಯ, ಟಿ ಗುರುಸಿದ್ದನಗೌಡ, ಎಂ ಬಸವರಾಜ್ ನಾಯ್ಕ್, ಡಾ. ಎಹೆಚ್ ಶಿವಯೋಗಿಸ್ವಾಮಿ, ಲೋಕಿಕೆರೆ ನಾಗರಾಜ್, ಬಿಜಿ ಅಜಯ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ಕೆಎಂ ಸುರೇಶ್, ಎಂಎನ್ ಕಲ್ಲೇಶ್, ಡಾ. ಟಿಜಿ ರವಿಕುಮಾರ್..