POWER SAMACHARA | KANNADA NEWS | 09-05-2023
ದಾವಣಗೆರೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ.
ಮೇ 08 ರಂದು 645000 ನಗದು ಮತ್ತು ರೂ.24367 ಮೌಲ್ಯದ 77.96 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮತದಾರರಿಗೆ ಹಂಚಿಕೆ ಮಾಡಲು ಹಣ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಪಕ್ಷವೊಂದರ ಕಾರ್ಯಕರ್ತರ ಮನೆ ತಪಾಸಣೆ ಮಾಡಿದ ವೇಳೆ ರೂ.645000 ನಗದು ವಶಪಡಿಸಿಕೊಂಡು ಖಜಾನೆಯಲ್ಲಿ ಇಡಲಾಗಿದೆ. ಇದುವರೆಗೆ ರೂ.10119057 ನಗದು, ರೂ.31802169.99 ಮೌಲ್ಯದ 47498.135 ಲೀ ಮದ್ಯ, 3.853 ಕೆ.ಜಿ ಮಾದಕ ವಸ್ತು ಅಂದಾಜು ಮೌಲ್ಯ ರೂ.71610, ರೂ.8500048 ಮೌಲ್ಯದ ಕುಕ್ಕರ್ ಸೇರಿದಂತೆ ಇತರೆ ವಸ್ತುಗಳು ಒಟ್ಟು ರೂ.5.04 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ನೀತಿ ಸಂಹಿತೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ.
ಮೇ.08 ರಂದು 77.96 ಲೀ ಮದ್ಯವನ್ನು ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮಾಡಿ ವಶಪಡಿಸಿಕೊಳ್ಳಲಾಗಿದೆ.