POWER SAMACHARA | KANNADA NEWS | BREKING NEWS| 05-06-2023
ದಾವಣಗೆರೆ: ಸಿಎಂ ಸಿದ್ದರಾಮಯ್ಯ ಅಂದರೆ ಮೊದಲೇ ಖಡಕ್ ಅಂತಾ ಎಲ್ಲರಿಗೂ ಗೊತ್ತಿರೋ ಸಂಗತಿ, ಬೆಣ್ಣೆನಗರಿ ದಾವಣಗೆರೆಯಲ್ಲಿ ಸಿಎಂ ಆದ ಬಳಿಕ ಮೊದಲ ಭಾರೀಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ರು, ಸಭೆಯಲ್ಲಿ ಕಿವಿಮಾತಿನ ಜೊತೆಗೆ ಖಡಕ್ ಸಂದೇಶಗಳನ್ನ ರವಾನಿಸಿದ್ದಾರೆ, ಬಾಣದಂತಿದ್ದ ಮಾತುಗಳಿಂದ ಅಧಿಕಾರಿ ವರ್ಗ ದಬ್ಬಿಗಾಗಿ ಹೋಗಿದ್ದಾರೆ.
ಕಿವಿಮಾತು ಹೇಳುತ್ತಾ ಕಿವಿ ಹಿಂಡಿದ ಸಿಎಂ..!
ಉಡಾಫೆ ಮಾಡಿದರೆ ಉಳಿಗಾಲವಿಲ್ಲ, ಜನರಿಗೆ ಸ್ಪಂದಿಸುವ ಕೆಲಸ ಮಾಡಿ, ಜನಪ್ರತಿನಿಧಿಗಳನ್ನು ಹೇಳಿದನ್ನ ಮೊದಲು ಕೇಳಿ, ಜನ ಬದಲಾವಣೆ ಬಯಸಿ ನಮಗೆ ಅಧಿಕಾರ ನೀಡಿದ್ದಾರೆ, ಅವರ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ, ಸ್ಪಂದಿಸದೇ ಹೋದಾರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕಟ್ಟಿಟ್ಟ ಬುತ್ತಿ, ಯಾರಿಗೂ ಮುಲಾಜಿಲ್ಲ, ಹೀಗೆ ಒಂದಾದ ಮೇಲೆ ಒಂದು ಬಾಣಗಳನ್ನ ಪ್ರಯೋಗಿಸಿದ್ದು, ನಾಡಿನ ದೊರೆ ಸಿದ್ದರಾಮಯ್ಯ, ಹೌದು.. ಸಿದ್ದರಾಮಯ್ಯ ಆಡಳಿತ ವಿಚಾರದಲ್ಲಿ ಪಕ್ಕಾ ಸುಕ್ಕಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ, ಪಿನ್ ಟು ಪಿನ್ ದಾಖಲಾತಿ ಸಮೇತ ವಿಚಾರಗಳನ್ನ ಮಂಡಿಸ್ತಾರೆ, ಸಮಯದ ಅಭಾವದ ನಡುವೆಯೂ ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಸಿದ್ದರಾಮಯ್ಯ ಅಧಿಕಾರಿ ವರ್ಗಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ, ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತಾ ಕಿವಿ ಹಿಂಡುವ ಕೆಲಸವನ್ನು ಮಾಡಿದ್ದಾರೆ, ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು, ಅವರು ಜನಪ್ರತಿನಿಧಿಗಳು, ನೀವು ಜನಸೇವೆ ಮಾಡಲು ನೇಮಕವಾಗಿರುವವರು ಅವರು ಹೇಳಿದ್ದಕ್ಕೆ ವಿಳಂಬ ಮಾಡದೇ ಸ್ಪಂದಿಸುವ ಕೆಲಸ ಮಾಡಬೇಕು, ಕೆಲಸ ತಡವಾದರೆ ಭ್ರಷ್ಟಾಚಾರ ಶುರುವಾಗುತ್ತೆ, ಹೀಗಾಗಿ ವಿಳಂಬ ಮಾಡಬೇಡಿ, ಜನಸ್ನೇಹಿ ಆಡಳಿತ ಮಾಡಿ, ಜನರು ಕಚೇರಿಗಳಿಗೆ ಬಂದಾಗ ಗೌರಯುತವಾಗಿ ಮಾತನಾಡಿ, ಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡಿಕೊಡಿ ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು, ನಾವು ಪ್ರತಿನಿಧಿಗಳು, ನೀವು ಸೇವಕರು ಉಡಾಫೆ ಮಾಡಿದರೇ ಅಂತವರಿಗೆ ಜಾಗ ಇಲ್ಲ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ..
ಮೊನಚು ಮಾತು, ಅಧಿಕಾರಿಗಳು ಸೈಲೆಂಟ್..!
ಸಿದ್ದರಾಮಯ್ಯ ಅವರ ಮೊನಚಾದ ಮಾತುಗಳು ಹೇಗಿದ್ದವು ಎಂದರೆ ದಪ್ಪ ಚರ್ಮದ ಅಧಿಕಾರಿಗಳು ಕೂಡ ಒಮ್ಮೆ ಬೆವತು ಹೋಗಿದ್ದರು, ಜನರಿಗೆ ಸ್ಪಂದಿಸದೇ ಹೋದರೆ ನಿರ್ದಾಕ್ಷಿಣ್ಯವಾಗಿ ಕ್ರಮ, ಯಾರಿಗೂ ಮುಲಾಜಿಲ್ಲ, ಸರ್ಕಾರಿ ಕಚೇರಿಗಳು ಜಿಡ್ಡು ಹಿಡಿದು ಕೂತಿವೆ, ದೂರು ಬಂದ ತಕ್ಷಣ ಸ್ಪಂದಿಸಿ, ಪತ್ರಿಕೆ, ಟಿವಿಯಲ್ಲಿ ಬಂದರು ಅಟೆಂಡ್ ಮಾಡಿ, ಎಸಿ ಕೆಳಗಡೆ ಕೂರುವುದು ಬಿಡಿ, ಫೀಲ್ಡ್ ಗೆ ಇಳೀರಿ, ಕಾರು, ಸೌಲಭ್ಯ ಕೊಟ್ಟಿರೋದು ಐಶಾರಾಮಿ ಜೀವನ ಮಾಡೋಕಲ್ಲ, ಜನರ ಸೇವೆ ಮಾಡೋಕೆ.. ಅರ್ಥ ಆಯ್ತಾ ಅಂತ ಎಚ್ಚರಿಸಿದ್ರು, ಬಿತ್ತನೆ ಶುರುವಾಗಿದೆ, ಮುಂಗಾರು ಪ್ರವೇಶ ಆಗುತ್ತೆ, ಬೀಜ, ಗೊಬ್ಬರ, ಕೀಟನಾಶಕ ಸಕಾಲಕ್ಕೆ ಕೊಡಿ, ಪ್ರವಾಹ ಬರದೇ ಇದ್ದರೆ ಒಳ್ಳೆಯದು, ಬರೋದು ಬೇಡ ಅಂತ ಪ್ರಾರ್ಥನೆ ಮಾಡೋಣ, ಬಂದರೆ ಸಿದ್ದತೆ ಮಾಡಿಟ್ಟುಕೊಳ್ಳಿ, ಯುದ್ದ ಕಾಲದಲ್ಲಿ ಶಸ್ತ್ರ ಅಭ್ಯಾಸ ಮಾಡಬೇಡಿ, ನಿರ್ಲಕ್ಷ್ಯ ಮಾಡಿದರೆ ಡಿಸಿ ಆಗಲಿ ಯಾರೇ ಆಗಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಜುಲೈ 7ನೇ ತಾರೀಕ್ ಬಜೆಟ್ ಅಧಿವೇಶನ; ಮತ್ತಷ್ಟು ಗ್ಯಾರಂಟಿ ಫಿಕ್ಸ್..!
ಮೀಟಿಂಗ್ ಗೂ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಜನರಿಗೆ ಮತ್ತಷ್ಟು ಗುಡ್ ನ್ಯೂಸ್ ಕೊಟ್ಟಿದ್ದಾರೆ, ಜುಲೈ 7ನೇ ತಾರೀಕ್ ಬಜೆಟ್ ಅಧಿವೇಶನ ನಡೆಯಲಿದೆ, ಈಗಾಗಲೇ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದ್ದೇವೆ, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲಾ ಯೋಜನೆಗಳನ್ನು ಬಜೆಟ್ ನಲ್ಲಿ ಜಾರಿ ಮಾಡುತ್ತೇವೆ ಎನ್ನುವುದರ ಮೂಲಕ ಮತ್ತಷ್ಟು ಭರಪೂರ ಕೊಡುಗೆ ಕೊಡಲು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ, ಗೋ ಹತ್ಯೆ ನಿಷೇಧ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ, 1964 ಆಕ್ಟ್ ನಲ್ಲಿ ಹೇಳಲಾಗಿದೆ, 12 ವರ್ಷ ತುಂಬಿದ ರಾಸುಗಳು, ಬರಡು ರಾಸುಗಳು, ವ್ಯವಸಾಯಕ್ಕೆ ಉಪಯೋಗವಿಲ್ಲದ ರಾಸುಗಳು ಮುಕ್ತಕ್ಕೆ ಅವಕಾಶ ಇದೆ, ಈ ಬಗ್ಗೆ ತಿದ್ದುಪಡಿಗಳು ನಡೆದಿವೆ, ಕಾಯ್ದೆ ವಾಪಾಸ್ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ದಾವಣಗೆರೆಯಲ್ಲಿಂದು ಅಧಿಕಾರಿ ವರ್ಗಕ್ಕೆ ಸಿಎಂ ಚುರುಕು ಮುಟ್ಟಿಸುವ ಕೆಲಸ ಮಾಡಿದ್ರು, ಇನ್ನಾದ್ರು ಜಿಡ್ಡು ಹಿಡಿದ ಆಡಳಿತ ವರ್ಗ ಚುರುಕಾಗುತ್ತಾ ಕಾದು ನೋಡಬೇಕಿದೆ..