POWER SAMACHARA | KANNADA NEWS | 18-04-2023
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಬೇರೆ ಕೆಲಸವೇ ಇಲ್ಲ, ಸುಳ್ಳು ಹೇಳೋದೆ ಒಂದು ಕೆಲಸ, ಸುಳ್ಳು ಹೇಳೋದ್ರಲ್ಲಿ ಕಾಂಗ್ರೆಸ್ ನಂಬರ್ ಒನ್ ಎಂದು ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಕಿಡಿಕಾರಿದ್ದಾರೆ..
ಲೋಕಾಯುಕ್ತ ದಾಳಿ ವೇಳೆ ಲಂಚ ಪ್ರಕರಣದಲ್ಲಿ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಜೈಲಿಗೆ ಹೋಗಲು ನಾನು ಕಾರಣ ಎಂಬ ಸುಳ್ಳು ಆರೋಪವನ್ನು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾಡಿದ್ದರು. ಈಗ ಮತ್ತೆ ಸುಳ್ಳು ಹೇಳುತ್ತಿದ್ದಾರೆ. ಲಿಂಗಾಯತರಿಗೆ ಬಿಜೆಪಿಯಲ್ಲಿ ಯಾವುದೇ ಮೋಸ ಮಾಡಿಲ್ಲ. ಬಿಎಸ್ ವೈ ಕಾಂಗ್ರೆಸ್ ಗೆ ಹೋಗಲ್ಲ, ಕಾಂಗ್ರೆಸ್ ಸುಳ್ಳು ಹೇಳುವ ಪಕ್ಷ ಎಂದು ಸಂಸದ ಜಿ. ಎಂ. ಸಿದ್ದೇಶ್ವರ ಕಿಡಿಕಾರಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟಿದ್ದಾರೆ. ಪಕ್ಷದಲ್ಲಿ ಇನ್ನು ಲಿಂಗಾಯತ ಸಮುದಾಯದ ನಾಯಕರಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಏನಿದ್ದರೂ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ. ನನ್ನದೇನಿದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಅಷ್ಟೇ ಎಂದು ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ಕ್ಷೇತ್ರಗಳು ಬರುತ್ತವೆ. ಹರಪನಹಳ್ಳಿ ವಿಧಾನಸಭಾ ಕ್ಷೇತ್ರವೂ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಎಂಟು ಕಡೆಗಳಲ್ಲಿಯೂ ಕಮಲ ಅರಳುವ ಭರವಸೆ ಇದೆ. ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಯಕೊಂಡ ಬಿಜೆಪಿ ಬಂಡಾಯ ಶಮನವಾಗುತ್ತೆ. ಈಗಾಗಲೇ ಬಂಡಾಯಗಾರರ ಜೊತೆ ನಾನು ಮಾತನಾಡಿದ್ದೇನೆ. ನಾಳೆ ಕೇಂದ್ರ ಆರೋಗ್ಯ ಸಚಿವರು ಆಗಮಿಸುತ್ತಿದ್ದು, ಎಲ್ಲರ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಲಾಗುವುದು. ಎಲ್ಲರೂ ಬಿಜೆಪಿ ಕಾರ್ಯಕರ್ತರೇ. ಹಾಗಾಗಿ ಬಂಡಾಯ ಶಮನ ಆಗುತ್ತದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ…